ಚಿತ್ರಹಿಂಸೆ ಕೊಟ್ಟು ಮಗನನ್ನು ಕೊಂದಂತೆ ಆರೋಪಿಗಳಿಗೂ ಕಠಿಣ ಶಿಕ್ಷೆಯಾಗ್ಲಿ: ಸ್ವಾಮಿ ತಂದೆ

Public TV
1 Min Read

– ದರ್ಶನ್ ಅಭಿಮಾನಿಗಳ ಕುರಿತು ಶಿವನಗೌಡ್ರು ಹೇಳಿದ್ದೇನು..?

ಚಿತ್ರದುರ್ಗ: ನನ್ನ ಮಗ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಕೊಂದಂತೆ ಆರೋಪಿಗಳಿಗೂ ಕಠಿಣ ಶಿಕ್ಷೆ ಆಗಬೇಕು ಎಂದು ತಂದೆ ಕಾಶಿನಾಥ್ ಶಿವನಗೌಡ್ರು (Kashinath Gowdru) ಹೇಳಿದರು.

ಕಿಡ್ನಾಪ್ ಹಾಗೂ ಕೊಲೆ ಪ್ರಕರಣ ಸಂಬಂಧ ದರ್ಶನ್ & ಗ್ಯಾಂಗ್ ಇಂದು ಜೈಲು ಪಾಲಾಗಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಾಡಿದ್ದುಣ್ಣೋ ಮಹರಾಯ ಎಂಬಂತೆ ಆರೋಪಿಗಳಿಗೆ ಶಿಕ್ಷೆಯಾಗಿದೆ. ದರ್ಶನ್ ತಪ್ಪು ಮಾಡಿರೋದಕ್ಕೆ ಜೈಲಿಗೆ ಸೇರಿದ್ದಾರೆ. ಅವರ ಗ್ಯಾಂಗ್ ತಪ್ಪು ಮಾಡಿರೋದಕ್ಕೆ ಕೋರ್ಟ್ ಜೈಲಿಗೆ ಸೇರಿಸಿದೆ. ಕೋರ್ಟ್ ಕಾರ್ಯಕ್ಕೆ ನಾವು ಶ್ಲಾಘನೆ ಮಾಡ್ತೀವಿ. ಪೊಲೀಸರ ತನಿಖೆ, ಕೋರ್ಟ್ ವಿಚಾರಣೆ ಬಗ್ಗೆ ನಂಬಿಕೆ ಇದೆ ಎಂದರು.

ನಮಗೆ ಯಾವ ರೀತಿ ನೋವಾಗಿದೆಯೋ ಅದೇ ರೀತಿ ಆರೋಪಿಗಳಿಗೆ ನೋವಾಗಬೇಕು. ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಕೊಂದಂತೆ ಆರೋಪಿಗಳಿಗೂ ಕಠಿಣ ಶಿಕ್ಷೆ ಆಗಬೇಕು. ನಮ್ಮ ಮನೆಯಲ್ಲಿ ನಮ್ಮ ತಾಯಿ ಅನಾರೋಗ್ಯಕ್ಕೆ ತುತ್ತಾಗಿ ಒದ್ದಾಡ್ತಿದ್ದೀವಿ. ನಮ್ಮ ಪ್ರಕಾರ, ನನ್ನ ಮಗ ಎಷ್ಟು ನೋವು ಅನುಭವಿಸಿದ್ದಾನೋ ಅದೇ ಅನುಭವ ಅವರಿಗೆ ಆಗಬೇಕು. ನನ್ನ ಮಗನ ಕೊಲೆಯೇ ಇವರಿಂದ ಕೊನೆಯಾಗಬೇಕು ಎಂದು ಗದ್ಗದಿತರಾದರು. ಇದನ್ನೂ ಓದಿ: ವೆಬ್ ಆಪ್ ಬಳಸಿ ಮಾತನಾಡಿರೋ ಆರೋಪಿಗಳು- ರಿಮ್ಯಾಂಡ್ ಕಾಪಿಯಲ್ಲಿ ಸ್ಫೋಟಕ ಅಂಶ ಬಯಲು

 

ದರ್ಶನ್ ಅಭಿಮಾನಿಗಳಿಗೆ ನಮ್ಮ ನೋವು ಅರ್ಥ ಆಗ್ತಿಲ್ಲ. ನಮ್ಮ ಮನೆ ಬಗ್ಗೆ ಯೋಚಿಸಿದ್ರೆ ಅವರಿಗೆ ಈ ಅಭಿಮಾನ ಇರ್ತಿರಲಿಲ್ಲ. ನಟನೆಗೂ ಜೀವನಕ್ಕೂ ತುಂಬಾ ವ್ಯತ್ಯಾಸ ಇರುತ್ತದೆ. ಅಭಿಮಾನಿಗಳ ಮನೆಯಲ್ಲಿ ಈ ಘಟನೆ ನಡೆದಿದ್ರೆ ಏನು ಮಾಡ್ತಿದ್ರು?. ಅದನ್ನು ಮೊದಲು ಅಭಿಮಾನಿಗಳು ಯೋಚಿಸಬೇಕು. ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಆಗಿ ದರ್ಶನ್ ಅಪರಾಧಿಗೆ ಶಿಕ್ಷೆ ವಿಧಿಸುತ್ತಿದ್ದರು. ಸಿನಿಮಾದಲ್ಲಿ ದರ್ಶನ್ ವಿಧಿಸಿದ ಕಠಿಣ ಶಿಕ್ಷೆ ಈಗ ಆತನಿಗೆ ವಿಧಿಸಬೇಕು ಎಂದು ಅವರು ಆಕ್ರೋಶ ಹೊರಹಾಕಿದರು.

Share This Article