‌ತಾಯಿ ಜೊತೆ ಕಾಲ್‌ನಲ್ಲಿದ್ದಾಗಲೇ ಕೆನಡಾದಲ್ಲಿ ಭಾರತೀಯ ಯುವಕನ ಗುಂಡಿಕ್ಕಿ ಹತ್ಯೆ

Public TV
1 Min Read

ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾ (Canada’s British Columbia) ಪ್ರಾಂತ್ಯದಲ್ಲಿ ಭಾರತೀಯ ಮೂಲದ 28 ವರ್ಷದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಯುವಕನನ್ನು ಯುವರಾಜ್‌ ಗೋಯಲ್‌ ಎಂದು ಗುರುತಿಸಲಾಗಿದ್ದು, ಇವರು ಪಂಜಾಬ್‌ ಮೂದವರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಾಲ್ವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸರ್ರೆಯ ಮನ್ವಿರ್ ಬಸ್ರಾಮ್ (23), ಸಾಹಿಬ್ ಬಸ್ರಾ (20), ಹರ್ಕಿರತ್ ಜುಟ್ಟಿ (23 ) ಮತ್ತು ಒಂಟಾರಿಯೊದ ಕೆಲೋನ್ ಫ್ರಾಂಕೋಯಿಸ್ ( 20 ) ಎಂದು ಗುರುತಿಸಲಾಗಿದೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯ ಸಂಬಂಧ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯುವರಾಜ್ ಗೋಯಲ್ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ತಿಳಿಸಿದ್ದಾರೆ.

ಸಹೋದರಿ ಚಾರು ಸಿಂಘ್ಲಾ ಅವರು ಸರ್ರೆಯಲ್ಲಿನ ಕಾರ್ ಡೀಲರ್‌ಶಿಪ್‌ನಲ್ಲಿ ಗೋಯಲ್ ಕೆಲಸ ಮಾಡುತ್ತಿದ್ದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಸಹೋದರನನ್ನು ಯಾಕೆ ಕೊಲೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಅವನು ಅಂತಹ ಯಾವುದೇ ಕೆಲಸಗಳಲ್ಲಿ ಭಾಗಿಯಾಗುವವನಲ್ಲ ಎಂದಿದ್ದಾರೆ.

ಗೋಯಲ್ ಅವರ ಸೋದರ ಮಾವ ಬವಾನ್‌ದೀಪ್, ಯುವರಾಜ್‌ ಭಾರತದಲ್ಲಿ ವಾಸವಾಗಿರುವ ತನ್ನ ತಾಯಿಯ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದನು. ಅವನು ಎಂದಿನಂತೆ ಜಿಮ್‌ ಮುಗಿಸಿ, ಫೋನ್‌ನಲ್ಲಿ ಅಮ್ಮನ ಜೊತೆ ಮಾತಾಡಿಕೊಂಡು ಬಂದು ಮನೆ ಹತ್ತಿರ ಕಾರು ನಿಲ್ಲಿಸಿ ಇಳಿಯುತ್ತಿದ್ದಂತೆಯೇ ಆತನ ಮೇಲೆ ಗುಂಡು ಹಾರಿಸಲಾಯಿತು ಎಂದು ತಿಳಿಸಿದ್ದಾರೆ.

ಈ ಕೊಲೆಗೆ ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆಗೆ ಇಳಿದಿದ್ದಾರೆ. ಅಲ್ಲದೇ ಈ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಕೂಡ ಪರಿಶೀಲನೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

Share This Article