ಹಾವೇರಿಯಲ್ಲಿ ಆಕಸ್ಮಿಕ ಬೆಂಕಿಗೆ 5 ಅಂಗಡಿಗಳು ಭಸ್ಮ- 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿ

Public TV
1 Min Read

– ಚಿಕ್ಕಮಗಳೂರಿನಲ್ಲಿ ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು

ಹಾವೇರಿ/ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಐದಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲಾದ ಘಟನೆ ಹಾವೇರಿ (Haveri) ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.

ಇಲೆಕ್ಟ್ರಿಕಲ್ ಅಂಗಡಿ, ಬೇಕರಿ, ಬೊಂಬೆ ಅಂಗಡಿ, ಫೂಟ್‌ವೇರ್ ಮತ್ತು ಹೊಟೇಲ್‌ಗೆ ಬೆಂಕಿ ಬಿದ್ದಿದ್ದು, ಅಂಗಡಿಯಲ್ಲಿನ (Shop) ವಸ್ತುಗಳು ಸುಟ್ಟು ಭಸ್ಮವಾಗಿವೆ. ಫೂಟ್‌ವೇರ್ ಅಂಗಡಿಯಿಂದ ದಟ್ಟಹೊಗೆ ಆವರಿಸಿದ್ದು, ದಟ್ಟವಾದ ಹೊಗೆಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಹಿರೇಕೆರೂರು ಶಾಸಕ ಯುಬಿ ಬಣಕಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂಸಭಾವಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ ಇದನ್ನೂ ಓದಿ: ಎಕ್ಸ್‌ಪ್ರೆಸ್‌ ವೇಯಲ್ಲಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು- ನಾಲ್ವರು ಗಂಭೀರ

ಇನ್ನೊಂದೆಡೆ ಶಾರ್ಟ್ ಸರ್ಕ್ಯೂಟ್‌ನಿಂದ (Short Circuit) ರಸ್ತೆ ಮಧ್ಯೆಯೇ ಕಾರು (Car) ಹೊತ್ತಿ ಉರಿದಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ತಾಲೂಕಿನ ಸರಸ್ವತಿಪುರ ಗೇಟ್ ಬಳಿ ನಡೆದಿದೆ. ನೋಡುನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಸ್ವಿಫ್ಟ್ ಕಾರು ಬೂದಿಯಾಗಿದೆ. ಚಿಕ್ಕಮಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಸಂದರ್ಭ ಏಕಾಏಕಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಪ್ರಯಾಣಿಕರು ಕೆಳಗಿಳಿದು ಜೀವ ಉಳಿಸಿಕೊಂಡಿದ್ದಾರೆ. ಬಳಿಕ ಕಡೂರು ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಇಂದಿನಿಂದ ಜೂನ್ 12 ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆ

Share This Article