ಮಂಡ್ಯದಲ್ಲಿ ಗೆದ್ದು ಬೀಗಿದ ಹೆಚ್‌.ಡಿ ಕುಮಾರಸ್ವಾಮಿ

Public TV
1 Min Read

ಮಂಡ್ಯ: ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರ ಫಲಿತಾಂಶದಲ್ಲಿ ಬಿಜೆಪಿ-ಜೆಡಿಎಸ್‌ (BJP- JDS) ಮೈತ್ರಿ ಅಭ್ಯರ್ಥಿ ಹೆಚ್‌.ಡಿ ಕುಮಾರಸ್ವಾಮಿ ಬಹುತೇಕ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು (Star Chandru) ವಿರುದ್ಧ ಹೆಚ್‌ಡಿಕೆ 2,71,344 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್‌ಡಿಕೆ ಗೆಲುವು ಬಹುತೇಕ ಖಚಿತವಾಗಿದೆ. ಮತಎಣಿಕೆ ಆರಂಭವಾದಿಗಿನಿಂದಲೂ ಕುಮಾರಸ್ವಾಮಿ ಮುನ್ನಡೆ ಕಾಯ್ದುಕೊಂಡು ಬಂದಿದ್ದರು.

ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರದಲ್ಲಿ ಒಕ್ಕಲಿಗರಿಬ್ಬರ ಮಧ್ಯೆಯೇ ಭಾರೀ ಪೈಪೋಟಿ ಏರ್ಪಟ್ಟಿತ್ತು. ಎನ್‌ಡಿಎ ಅಭ್ಯರ್ಥಿ, ಜೆಡಿಎಸ್‌ನ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಕಾಂಗ್ರೆಸ್‌ನ ವೆಂಕಟರಮಣೇಗೌಡ ಅಲಿಯಾಸ್‌ ಸ್ಟಾರ್‌ ಚಂದ್ರು ನಡುವೆ ಇಲ್ಲಿ ಫೈಟ್‌ ಇತ್ತು. ಇದೀಗ ಸ್ಟಾರ್ ಚಂದ್ರು ವಿರುದ್ಧ ಹೆಚ್‌ಡಿಕೆ ಗೆಲುವು ಸಾಧಿಸಿದರೂ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಆಗಬೇಕಷ್ಟೇ.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದರು. ಇತ್ತ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್‌ ಕಣಕ್ಕಿಳಿದು ನಿಖಿಲ್‌ ವಿರುದ್ಧ ಭರ್ಜರಿ ಜಯಗಳಿಸಿದ್ದರು. ಈ ಬಾರಿಯೂ ನಿಖಿಲ್‌ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರೆ ಅಂತ ಹೇಳಲಾಗ್ತಿತ್ತು. ಈ ನಡುವೆ ಸುಮಲತಾ ಅಂಬರೀಶ್‌ ಕೂಡ ಬಿಜೆಪಿಯಿಂದ ಟಿಕೆಟ್‌ಗಾಗಿ ಭಾರೀ ಕಸರತ್ತು ನಡೆಸಿದ್ದರು. ಆದರೆ ಕೊನೆಗೆ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರೇ ಸ್ವತಃ ಕಣಕ್ಕಿಳಿದಿದ್ರು.

ವಿಜಯೋತ್ಸವಕ್ಕೆ ಬ್ರೇಕ್: ವಿಜಯೋತ್ಸವ, ಸಂಭ್ರಮಾಚರಣೆ, ಪಟಾಕಿ ಸಿಡಿಸುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಿರುವ ಮಂಡ್ಯ ಜಿಲ್ಲಾಡಳಿತ ಜೂನ್ 4 ರ ಬೆಳಗ್ಗೆ 6 ಗಂಟೆಯಿಂದ ಜೂನ್ 5ರ ಬೆಳಗ್ಗೆ 6 ರವರೆಗೆ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಅಲ್ಲದೇ ಮಂಡ್ಯ ನಗರ ವ್ಯಾಪ್ತಿಯಲ್ಲಿ ಜೂನ್ 3ರ ಸಂಜೆ 6 ಗಂಟೆಯಿಂದ 5 ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

Share This Article