ಪ್ಯಾಲೆಸ್ತೀನ್‌ ಬೆಂಬಲಿಸಿದ್ದಕ್ಕೆ ಟ್ರೋಲ್‌ ಬೆನ್ನಲ್ಲೇ ಹಿಟ್‌ಮ್ಯಾನ್‌ ಪತ್ನಿ ಪೋಸ್ಟ್‌ ಡಿಲೀಟ್

Public TV
2 Min Read

ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಸದ್ಯಕ್ಕೆ ಟಿ20 ವಿಶ್ವಕಪ್ ಆಡಲು ಅಮೆರಿಕಾದಲ್ಲಿ (America) ತರಬೇತಿ ಪಡೆಯುತ್ತಿದ್ದಾರೆ. ಆದರೆ ಅವರ ಪತ್ನಿ ರಿತಿಕಾ ಸಜ್ದೇ (Ritika Sajdeh) ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಆಗುತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯನ್ನು ಅಪ್‌ಡೇಟ್ ಮಾಡುವಾಗ, ಅವರು ‘ಆಲ್ ಐಸ್ ಆನ್ ರಫಾ’ (All Eyes On Rafah) ಅನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ. ಕೂಡಲೇ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ನೆಟ್ಟಿಗರು ಟೀಕಿಸಲು ಪ್ರಾರಂಭಿಸಿದರು. ವಿವಾದವಾಗುತ್ತಿದ್ದಂತೆಯೇ ರೋಹಿತ್‌ ಪತ್ನಿ ತಮ್ಮ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ.

ಟ್ರೋಲ್‌ ಯಾಕೆ?: ಇತ್ತೀಚೆಗೆ ಪ್ಯಾಲೇಸ್ತೀನಿಯನ್ ನಗರ ರಫಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 45 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಾದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ಯಾಲೆಸ್ತೀನ್‌ನೊಂದಿಗೆ ತಮ್ಮ ಒಗ್ಗಟ್ಟನ್ನು ತೋರಿಸಲು ‘ಆಲ್ ಐಸ್ ಆನ್ ರಾಫಾ’ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಹ್ಯಾಶ್‌ಟ್ಯಾಗ್ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವಿಶ್ವಾದ್ಯಂತ ಭಾರೀ ಟ್ರೆಂಡಿಂಗ್ ಆಯಿತು. ಇದನ್ನೂ ಓದಿ: ನಿರಾಶ್ರಿತರಿದ್ದ ಡೇರೆಗಳ ಮೇಲೆ ಇಸ್ರೇಲ್‌ ವಾಯುದಾಳಿ; 45 ಮಂದಿ ಸಾವು

ಇತ್ತ ರಿತಿಕಾ ಸಜ್ದೇ ಅವರು ತಮ್ಮ ಇನ್‌ಸ್ಟಾಗ್ರಾಮ್ (Instagram) ಸ್ಟೋರಿಯಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ರಿತಿಕಾ ಪೋಸ್ಟ್‌ ಮಾಡುತ್ತಿದ್ದಂತೆಯೇ ಭಾರೀ ಟೀಕೆಗೆ ಗುರಿಯಾದರು. ಪ್ಯಾಲೆಸ್ತೀನ್ (Palestine) ಜನತೆಯನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕಾಗಿ ಟ್ರೋಲ್‌ ಮಾಡಿ ಆಕ್ರೋಶ ಹೊರಹಾಕಿದರು. ಎಕ್ಸ್‌ ಬಳಕೆದಾರರಲ್ಲಿ ಕೆಲವರು ಭಾರತೀಯ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಆರೋಪಿಸಿದರು. ಇನ್ನೂ ಕೆಲವರು ರಾಫಾ ಎಲ್ಲಿದ್ದಾರೆ ಎಂದು ರಿತಿಕಾಗೆ ತಿಳಿದಿಲ್ಲ ಎಂದು ಲೇವಡಿ ಮಾಡಿದ್ದಾರೆ. ಈ ಬೆನ್ನಲ್ಲೇ ರಿತಿಕಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ಆ ಪೋಸ್ಟ್ ತೆಗೆದುಹಾಕಿದ್ದಾರೆ.

ಈ ಬಗ್ಗೆ ರಿತಿಕಾ ಅಥವಾ ರೋಹಿತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ಪ್ಯಾಲೆಸ್ತೀನ್ ಜನರಿಗೆ ತಮ್ಮ ಬೆಂಬಲವನ್ನು ತೋರಿಸಿದ್ದಾರೆ. ಇವರಲ್ಲಿ ಕರೀನಾ ಕಪೂರ್, ಆಲಿಯಾ ಭಟ್, ವರುಣ್ ಧವನ್, ತೃಪ್ತಿ ದಿಮ್ರಿ, ಸಮಂತಾ ಪ್ರಭು, ಫಾತಿಮಾ ಸನಾ ಶೇಖ್, ಸ್ವರಾ ಭಾಸ್ಕರ್ ಮತ್ತು ದಿಯಾ ಮಿರ್ಜಾ ಸೇರಿದ್ದಾರೆ.

Share This Article