ಹವಾಮಾನ ವೈಪರೀತ್ಯ – 24 ಗಂಟೆಯಲ್ಲಿ 250ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ!

Public TV
2 Min Read

– 80 ಕಿಮೀ ವೇಗದಲ್ಲಿ ಬೀಸಿದ ಗಾಳಿ ರಭಸಕ್ಕೆ ಆಟಿಕೆಯಂತಾದ ವಿಮಾನ

ವಾಷಿಂಗ್ಟನ್‌: ತೀವ್ರ ಹವಾಮಾನ ವೈಪರೀತ್ಯದಿಂದಾಗಿ (Severe Weather) ಡಲ್ಲಾಸ್ ಫೋರ್ಟ್ ವರ್ತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (DFW International Airport) ಕಳೆದ 24 ಗಂಟೆಯಲ್ಲಿ 250ಕ್ಕೂ ಹೆಚ್ಚಿನ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.

ಟೆಕ್ಸಾಸ್‌ನತ್ತ ಬೀಸುತ್ತಿದ್ದ ಚಂಡಮಾರುತ ಹಾಗೂ ಬಿರುಗಾಳಿಯ ವಾತಾವರಣವು ಡಿಎಫ್‌ಡಬ್ಲ್ಯೂನ 700ಕ್ಕೂ ಹೆಚ್ಚು ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಈ ಕುರಿತ ವೀಡಿಯೋವನ್ನು ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ವಿಮಾನಯಾನ ಸಂಸ್ಥೆ ಹಂಚಿಕೊಂಡಿದೆ. ಗಂಟೆಗೆ 80 ಕಿಮೀ ವೇಗದಲ್ಲಿ ಬೀಸುತ್ತಿದ್ದ ಗಾಳಿಯ ರಭಸಕ್ಕೆ ಅಮೇರಿಕನ್ ಏರ್‌ಲೈನ್ಸ್‌ನ (American Airlines) 737-800 ವಿಮಾನವು ಆಟಿಕೆಯಂತೆ ಆಡುತ್ತಿರುವುದು ಕಂಡುಬಂದಿದೆ.

ವರದಿಗಳ ಪ್ರಕಾರ, ಡಲ್ಲಾಸ್-ಫೋರ್ಟ್ ವರ್ತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಳೆದ 24 ಗಂಟೆಯಲ್ಲಿ ಸುಮಾರು 250 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. 500ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ವಿಳಂಬಗೊಳಿಸಿದೆ ಎಂದು ತಿಳಿದುಬಂದಿದೆ.

ಹವಾಮಾನ ಪರಿಸ್ಥಿತಿ ಹೇಗಿದೆ?
ಡಲ್ಲಾಸ್-ಫೋರ್ಟ್ ವರ್ತ್ ಮೂಲಕ ಪೂರ್ವ ಟೆಕ್ಸಾಸ್‌ನತ್ತ ತೀವ್ರ ಚಂಡಮಾರುತ ಸಂಭವಿಸಿದೆ ಸುಮಾರು 3 ಸೆ.ಮೀ ನಷ್ಟು ಆಲಿಕಲ್ಲು ಸಹಿತ ಮಳೆ ಉಂಟಾಗಿದೆ. ಮುಂದಿನ ಕೆಲ ಗಂಟೆಗಳ ಕಾಲ 2 ಸೆ.ಮೀ ನಷ್ಟು ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಭಾರೀ ಮಳೆಯು ಪ್ರವಾಹ ಸಮಸ್ಯೆಗಳನ್ನು ಉಂಟುಮಾಡಬಹುದು, ಮುನ್ನೆಚ್ಚರಿಕೆ ತೆಗೆದುಕೊಳ್ಳಿ, ಪ್ರವಾಹ ಪರಿಸ್ಥಿತಿಯಲ್ಲಿ ವಿಮಾನಗಳ ಹಾರಾಟ ನಡೆಸದಂತೆ ಎನ್‌ಡಬ್ಲ್ಯೂಎಸ್‌ ಫೋರ್ಟ್‌ ವರ್ತ್‌ ತನ್ನ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಸದ್ಯ ಚಂಡಮಾರುತರಿಂದ ಟೆಕ್ಸಾಸ್‌ನಲ್ಲಿ ಸುಮಾರು 10 ಲಕ್ಷ ಜನರು ವಿದ್ಯುತ್‌ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Share This Article