ಹಮಾಸ್‌ ಥೀಮ್‌ ಕೇಕ್‌ನಲ್ಲಿ 4ರ ಬಾಲಕನ ಬರ್ತ್‌ ಡೇ ಸೆಲೆಬ್ರೇಶನ್‌- ಭಾರೀ ಆಕ್ರೋಶ

Public TV
2 Min Read

ಕ್ಯಾನ್‌ಬೆರಾ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಹಮಾಸ್‌ (Hamas) ಉಗ್ರರ ಥೀಮ್‌ ನಲ್ಲಿ ಹುಟ್ಟುಹಬ್ಬ (Boy Birthday) ಆಚರಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಆಸ್ಟ್ರೇಲಿಯಾದಲ್ಲಿ 4 ವರ್ಷದ ಮಗುವಿನ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ವಿಭಿನ್ನವಾಗಿ ಕೇಕ್‌ ಮಾಡಲಾಗಿತ್ತು. ಅದರಲ್ಲಿ ಪ್ಯಾಲೆಸ್ತೀನ್ ಧ್ವಜಗಳಿಂದ ಸುತ್ತುವರಿದಿರುವ ಉಗ್ರಗಾಮಿಗಳನ್ನು ಬಿಂಬಿಸಲಾಗಿತ್ತು. ಇತ್ತ ಕೇಕ್ ತಯಾರಿಸುವ ಜವಾಬ್ದಾರಿಯುತ ಆಸ್ಟ್ರೇಲಿಯನ್ ಬೇಕರಿ ಅದರ ಫೋಟೋಗಳನ್ನು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ಬಳಿಕ ಈ ಫೋಟೋಗಳು ಭಾರೀ ವೈರಲ್‌ ಆದವು. ಪರಿಣಾಮ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ಫೋಟೋ ವೈರಲ್‌ ಆಗುತ್ತಿದ್ದಂತೆಯೇ ಎಚ್ಚೆತ್ತ ಆಸ್ಟ್ರೇಲಿಯಾದ ಫೆಡರಲ್ ಪೊಲೀಸರು ತನಿಖೆಗಿಳಿದಿದ್ದಾರೆ. ವರದಿಗಳ ಪ್ರಕಾರ, ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಲಾಗಿದೆ.

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಫುಫು ಅವರ ಓವನ್ ಬೇಕರಿ ಮಂಗಳವಾರ ಪ್ಯಾಲೇಸ್ಟಿನಿಯನ್ ಧ್ವಜದಿಂದ ಅಲಂಕರಿಸಲ್ಪಟ್ಟ ದೊಡ್ಡ ಕೇಕ್ ಪಕ್ಕದಲ್ಲಿ ಬಾಲಕ ನಿಂತಿರುವ ಹಾಗೂ ಹಮಾಸ್‌ನ ವಕ್ತಾರ ಅಬು ಒಬೈದಾ ಅವರ ಬೆರಳನ್ನು ಮೇಲಕ್ಕೆತ್ತಿದ ಫೋಟೋಗಳನ್ನು ಪೋಸ್ಟ್ ಮಾಡಿದೆ. ಇತ್ತ ಬರ್ತ್‌ ಡೇ ಬಾಯ್‌ ಕೂಡ ತಲೆಗೆ ಸ್ಕಾರ್ಫ್ ಮತ್ತು ಕೇಕ್ ಮೇಲಿನ ಆಕೃತಿಯನ್ನು ಹೋಲುವ ಉಡುಪನ್ನು ಧರಿಸಿ ಫೋಟೋಗೆ ಪೋಸ್‌ ಕೊಟ್ಟಿದ್ದಾನೆ.

ಫೋಟೋ ಸೋಶಿಯಲ್‌ ಮೀಡಿಯಾಗೆ ಅಪ್ಲೋಡ್‌ ಮಾಡುತ್ತಿದ್ದಂತೆಯೇ ಮೊದ ಮೊದಲು ಕೇಕ್‌ ಬಗ್ಗೆ ಪಾಸಿಟಿವ್‌ ಕಾಮೆಂಟ್‌ಗಳು ಬರತೊಡಗಿದರೆ ಆ ನಂತರ ಭಾರೀ ಟೀಕೆ ವ್ಯಕ್ತವಾಯಿತು. ಮಗುವನ್ನು ಭಯೋತ್ಪಾದಕನಂತೆ ಬಿಂಬಿಸುವುದು ಖಂಡನೀಯ ಎಂಬ ಆಕ್ರೋಶ ಹೊರಬಂದ ಬೆನ್ನಲ್ಲೇ ಫೋಟೋ ಅಪ್ಲೋಡ್‌ ಮಾಡಿದವರು ತಮ್ಮ Instagram ಮತ್ತು Facebook ಖಾತೆಗಳನ್ನೇ ಬ್ಲಾಕ್‌ ಮಾಡಿದ್ದಾರೆ.

ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಪ್ರಧಾನಿ ಕ್ರಿಸ್ ಮಿನ್ಸ್ ಅವರು ಕೇಕ್ ಫೋಟೋಗಳನ್ನು ನೋಡಿ ಭಯಾನಕ ಬೆಳವಣಿಗೆ ಎಂದರು. ಹಮಾಸ್ ಒಂದು ದುಷ್ಟ ಭಯೋತ್ಪಾದಕ ಸಂಘಟನೆಯಾಗಿದೆ. ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳು ಮುಗ್ಧ ಮತ್ತು ವಿನೋದಮಯವಾಗಿರಬೇಕು. ಈ ರೀತಿ ದ್ವೇಷಪೂರಿತವಾಗಿರಬಾರದು ಎಂದು ಕಿಡಿಕಾರಿದರು.

ಹಮಾಸ್ ನೇತೃತ್ವದ ಉಗ್ರರು ಕಳೆದ ವರ್ಷ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿಯ ಮೂಲಕ 1,200 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಗಾಜಾದಲ್ಲಿ ಸುಮಾರು ಎಂಟು ತಿಂಗಳ ಸುದೀರ್ಘ ಯುದ್ಧವನ್ನು ಪ್ರಚೋದಿಸಿದರು. ಸುಮಾರು 250 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡರು.

Share This Article