ಕತ್ತು ಹಿಸುಕಿ, ಚರ್ಮ ಸುಲಿದು ಬಾಂಗ್ಲಾ ಸಂಸದನ ದೇಹವನ್ನು ಕತ್ತರಿಸಿ ಹಾಕಿದ್ರು!

Public TV
1 Min Read

ಕೋಲ್ಕತ್ತಾ: ಇತ್ತೀಚೆಗೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್‌ ಅಜೀಂ ಅನಾರ್‌ (Anwarul Azim Anar) ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಸಿಐಡಿ ಅಧಿಕಾರಿಗಳು ನಡೆಸಿದ್ದ ತನಿಖೆಯ ವೇಳೆ ಮಹತ್ವದ ಅಂಶವೊಂದು ಬಯಲಾಗಿದೆ.

ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸಂಸದರನ್ನು ಕತ್ತು ಹಿಸುಕಿ, ಚರ್ಮ ಸುಲಿದು ಕತ್ತರಿಸಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಮುಂಬೈನಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗ ಜಿಹಾದ್ ಹವಾಲ್ದಾರ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈತ ಸಂಸದರ ಭೀಕರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಸಿಐಡಿ ಮೂಲಗಳ ಪ್ರಕಾರ, ಕೋಲ್ಕತ್ತಾದ ನ್ಯೂಟೌನ್‌ನಲ್ಲಿರುವ ಫ್ಲಾಟ್‌ನಲ್ಲಿ ಕೊಲೆ ಮತ್ತು ಸಂಸದರ ದೇಹವನ್ನು ತುಂಡು ತುಂಡಾಗಿಸಿ ವಿಕೃತಿ ಮೆರೆದಿರುವ ಬಗ್ಗೆ ಜಿಹಾದ್ ಹವಾಲ್ದಾರ್ ಒಪ್ಪಿಕೊಂಡಿದ್ದಾನೆ. ಈ ಕೃತ್ಯವನ್ನು ಮಾಡಿರುವ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜೊತೆಗೆ ಈ ಹೇಯ ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಬಾಂಗ್ಲಾದೇಶ ಮೂಲದ ಯುಎಸ್ ಪ್ರಜೆ ಅಖ್ತರುಜ್ಜಮಾನ್ ಎಂದು ಹವಾಲ್ದಾರ್ ಬಾಯ್ಬಿಟ್ಟಿದ್ದಾನೆ. ಅಖ್ತರುಜ್ಜಮಾನ್ ಆದೇಶದ ಮೇರೆಗೆ, ಹವಾಲ್ದಾರ್ ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ಸೇರಿ ನ್ಯೂಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಸಂಸದರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹವಾಲ್ದಾರ್ ವಿವರಿಸಿದ್ದಾನೆ.

ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಸಿಐಡಿ, ನ್ಯೂ ಟೌನ್ ಫ್ಲಾಟ್‌ನಲ್ಲಿ ರಕ್ತದ ಕಲೆಗಳನ್ನು ಪತ್ತೆಹಚ್ಚಿದೆ. ದೇಹದ ಭಾಗಗಳನ್ನು ಎಸೆಯಲು ಬಳಿರುವ ಹಲವಾರು ಪ್ಲಾಸ್ಟಿಕ್ ಚೀಲಗಳನ್ನು ಸಹ ವಶಪಡಿಸಿಕೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸಂಸದರನ್ನು ಮೊದಲು ಕತ್ತು ಹಿಸುಕಿ ನಂತರ ಅವರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಗಿದೆ. ಬಳಿಕ ಹತ್ಯೆ ಕುರಿತು ಯಾವುದೇ ಕುರುಹು ಕೂಡ ಸಿಗದಂತೆ ಕೋಲ್ಕತ್ತಾದ ವಿವಿಧ ಪ್ರದೇಶಗಳಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 13 ರಂದು ಕೋಲ್ಕತ್ತಾದಲ್ಲಿ ನಾಪತ್ತೆಯಾಗಿದ್ದ ಅನಾರ್ ಹತ್ಯೆಗೀಡಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಗೃಹ ಸಚಿವ ಅಸಾದುಝಮಾನ್ ಖಾನ್ ತಿಳಿಸಿದ್ದಾರೆ. ಸದ್ಯ ಜಿಹಾದ್ ಹವಾಲ್ದಾರ್ ನನ್ನು ಇಂದು ಬರಾಸತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Share This Article