ಶಿವಕಾರ್ತಿಕೇಯನ್‌ಗೆ ರಶ್ಮಿಕಾ ಮಂದಣ್ಣ ಹೀರೋಯಿನ್

Public TV
1 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಬಹುಭಾಷಾ ನಾಯಕಿಯಾಗಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್, ರಣ್‌ಬೀರ್ ಕಪೂರ್, ಸಲ್ಮಾನ್ ಖಾನ್ ನಂತರ ಮತ್ತೆ ತಮಿಳಿನ ಸ್ಟಾರ್ ನಟನ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಸಲ್ಮಾನ್ ಖಾನ್‌ಗೆ (Salman Khan) ಹೀರೋಯಿನ್ ಆಗುವ ಮೂಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಈಗ ತಮಿಳಿನ ನಟ ಶಿವಕಾರ್ತಿಕೇಯನ್ (Sivakarthikeyan) ಚಿತ್ರಕ್ಕೆ ನಟಿ ಕೈಜೋಡಿಸಿದ್ದಾರೆ ಎನ್ನಲಾಗಿದೆ. ಅವರ ಮುಂಬರುವ ಸಿನಿಮಾಗೆ ರಶ್ಮಿಕಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮೊದಲ ಬಾರಿಗೆ ಶಿವಕಾರ್ತಿಕೇಯನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಳ್ಳುವ ಸಿನಿಮಾ ಬಗ್ಗೆ ಸುದ್ದಿ ಹಬ್ಬಿದೆ. ಚಿತ್ರತಂಡ ಈಗಾಗಲೇ ನಟಿಯನ್ನು ಸಂಪರ್ಕಿಸಿ ಕಥೆ ಕೂಡ ಹೇಳಿದ್ದಾರೆ. ಆದರೆ ‘ಪುಷ್ಪ’ (Pushpa) ನಟಿ ಹೊಸ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ಕೊಟ್ರಾ? ಎಂಬುದರ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಚಿತ್ರತಂಡ ಅಧಿಕೃತ ಘೋಷಣೆ ಮಾಡುವವರೆಗೂ ಕಾಯಬೇಕಿದೆ.

ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಬಾಲಿವುಡ್‌ನಲ್ಲಿ ಹೆಚ್ಚೆಚ್ಚು ಅವಕಾಶಗಳು ನಟಿಗೆ ಅರಸಿ ಬರುತ್ತಿವೆ.

ಸದ್ಯ ಪುಷ್ಪ 2, ಅನಿಮಲ್ ಪಾರ್ಕ್, ರೈನ್‌ಬೋ, ಸಿಖಂದರ್, ಕುಬೇರ, ದಿ ಗರ್ಲ್‌ಫ್ರೆಂಡ್ ಸೇರಿದಂತೆ ಹಲವು ಸಿನಿಮಾ ರಶ್ಮಿಕಾ ಕೈಯಲ್ಲಿವೆ.

Share This Article