ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ – ಮನನೊಂದು ಸಹೋದರಿ ಆತ್ಮಹತ್ಯೆಗೆ ಯತ್ನ

Public TV
2 Min Read

ಹುಬ್ಬಳ್ಳಿ: ನಗರದ ವೀರಾಪುರ ಓಣಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಂಜಲಿ ಅಂಬಿಗೇರ ಹತ್ಯೆಯಿಂದ (Anjali Murder Case) ಬೇಸತ್ತ ಆಕೆಯ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶನಿವಾರ (ಮೇ 18) ಅಂಜಲಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಂಜಲಿ ಸಹೋದರಿ ಯಶೋಧಾ ಅವರು, ಮನೆಗೆ ಮರಳಿದ ಬಳಿಕ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಸಹ ಯುವತಿ ತೀವ್ರ ಅಸ್ವಸ್ಥಗೊಂಡಿದ್ದು, ಪ್ರಜ್ಞೆ ತಪ್ಪಿದ್ದರು ಎಂದು ತಿಳಿದುಬಂದಿದೆ.

ಏನಿದು ಪ್ರಕರಣ:
ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ (21) ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ (Vishwa) ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನ ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಹತ್ಯೆಗೈದಿದ್ದ. ಇದನ್ನೂ ಓದಿ: ಅಂಜಲಿ ಬಳಿಕ ರೈಲಿನಲ್ಲಿ ಮಹಿಳೆಗೆ ಚಾಕು ಹಾಕಲು ಯತ್ನಿಸಿ ಸಿಕ್ಕಿಬಿದ್ದ ಕಿರಾತಕ ವಿಶ್ವ

ಮೊದಲಿಗೆ ಮನೆಯ ಪಡಸಾಲೆಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದ. ಅಷ್ಟಕ್ಕೇ ತೃಪ್ತಿಯಾಗದೇ ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕುವಿನಿಂದ ಚುಚ್ಚಿ ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಆರೋಪಿ ಹೊರ ನಡೆದಿದ್ದ.

ಅಂಜಲಿ ಹತ್ಯೆ ಮಾಡಿದ ಬಳಿಕ ವಿಶ್ವ ಪರಾರಿಯಾಗಿ ದಾವಣಗೆರೆ  (Davanagere) ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಈ ವೇಳೆ ರೈಲಿನಲ್ಲಿ ಮಹಿಳೆ ಜೊತೆ ಗಲಾಟೆ ಮಾಡಿ ಸಿಟ್ಟಾಗಿ ಚಾಕು ಹಾಕಲು ಮುಂದಾಗಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರಯಾಣಿಕರು ಆತನಿಗೆ ರೈಲಿನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದರು. ಜನರಿಂದ ತಪ್ಪಿಸಿಕೊಳ್ಳಲು ವಿಶ್ವ ರೈಲಿನಿಂದ ಜಿಗಿದಿದ್ದ. ಹಳಿಯಲ್ಲಿ ಬಿದ್ದು ಗಾಯಗೊಂಡಿದ್ದ ಈತನನ್ನು ದಾವಣಗೆರೆ ರೈಲ್ವೇ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ವೇಳೆ ವಿಶ್ವನ ವಿಳಾಸ ಇತ್ಯಾದಿ ಮಾಹಿತಿಗಳನ್ನು ಪರಿಶೀಲಿಸಿದಾಗ ಈತನೇ ಅಂಜಲಿಯನ್ನು ಕೊಲೆ ಮಾಡಿದ ಆರೋಪಿ ಎನ್ನುವುದು ಪೊಲೀಸರಿಗೆ ದೃಢಪಟ್ಟಿತ್ತು. ಇದನ್ನೂ ಓದಿ: ಅಂಜಲಿ ಹತ್ಯೆಗೈದಿದ್ದ ಆರೋಪಿ ಅರೆಸ್ಟ್ – ಬಗೆದಷ್ಟು ಬಯಲಾಗ್ತಿದೆ ವಿಶ್ವನ ದುಷ್ಕೃತ್ಯ

Share This Article