ಮೊದಲ ಬಾರಿಗೆ ED ಜಾಹೀರಾತು ನೋಡುತ್ತಿದ್ದೇವೆ: ಬಾಂದ್ರಾ-ವರ್ಲಿ ಸೀ ಲಿಂಕ್ ಉದಾಹರಿಸಿ ರಶ್ಮಿಕಾಗೆ ಕೇರಳ ಕಾಂಗ್ರೆಸ್‌ ತಿರುಗೇಟು

By
3 Min Read

– ವಿಡಿಯೋದಲ್ಲಿ ಅಟಲ್‌ ಸೇತುವನ್ನು ಹೊಗಳಿದ್ದ ರಶ್ಮಿಕಾ
– ಅಟಲ್‌ ಸೇತುಗೆ ಹೋಲಿಸಿದ್ರೆ ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ ವಾಹನ ದಟ್ಟಣೆ ಹೆಚ್ಚು

ತಿರುವನಂತಪುರಂ: ಕಳೆದ ಹತ್ತು ವರ್ಷದಲ್ಲಿ ಭಾರತ (India) ಅಭಿವೃದ್ಧಿಯಾಗಿದೆ ಎಂದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಹೇಳಿಕೆಗೆ ಕೇರಳ ಕಾಂಗ್ರೆಸ್ (Kerala Congress) ತಿರುಗೇಟು ನೀಡಿದೆ.

ರಾಷ್ಟ್ರವು ಈ ಮೊದಲು ಪಾವತಿಸಿದ ಜಾಹೀರಾತುಗಳು ಮತ್ತು ಬಾಡಿಗೆ ಜಾಹೀರಾತುಗಳನ್ನು ನೋಡಿದೆ. ಜಾರಿ ನಿರ್ದೇಶನಾಲಯ (ED) ನಿರ್ದೇಶನದ ಜಾಹೀರಾತನ್ನು ನಾವು ನೋಡುತ್ತಿರುವುದು ಇದೇ ಮೊದಲು. ಜಾಹೀರಾತು ಚೆನ್ನಾಗಿ ಬಂದಿದೆ ಒಳ್ಳೆಯ ಕೆಲಸ ಎಂದು ಹೇಳಿ ಕಾಲೆಳೆದಿದೆ. ಅಷ್ಟೇ ಅಲ್ಲದೇ ಬಾಂದ್ರಾ-ವರ್ಲಿ ಸೀ ಲಿಂಕ್ (Bandra–Worli Sea Link) ಉದಾಹರಣೆ ನೀಡಿ ದೀರ್ಘವಾದ ಪೋಸ್ಟ್‌ ಹಾಕಿದೆ. ದನ್ನೂ ಓದಿ: RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

ಪೋಸ್ಟ್‌ನಲ್ಲಿ ಏನಿದೆ?
ನಿಮ್ಮ ಜಾಹೀರಾತಿನಲ್ಲಿ ಅಟಲ್ ಸೇತು (Atal Setu) ಪ್ರಾಯೋಗಿಕವಾಗಿ ಖಾಲಿಯಾಗಿರುವುದನ್ನು ನಾವು ಗಮನಿಸಿದ್ದೇವೆ. ನಾವು ಕೇರಳದಲ್ಲಿ ಇರುವುದರಿಂದ ಮುಂಬೈನಲ್ಲಿ ಕಡಿಮೆ ಟ್ರಾಫಿಕ್ ಇರಬಹುದು ನಾವು ಆರಂಭದಲ್ಲಿ ಭಾವಿಸಿದ್ದೆವು. ಈ ಬಗ್ಗೆ ನಾವು ಮುಂಬೈನಲ್ಲಿರುವ ಕಾಂಗ್ರೆಸ್ ಸ್ನೇಹಿತರೊಂದಿಗೆ ಕೇಳಿದಾಗ ಬಹಳಷ್ಟು ವಿಚಾರಗಳು ತಿಳಿಯಿತು.

ರಾಜೀವ್ ಗಾಂಧಿ ಬಾಂದ್ರಾ-ವರ್ಲಿ ಸೀ ಲಿಂಕ್ ಹೆಚ್ಚು ವಾಹನ ದಟ್ಟಣೆಯನ್ನು ಹೊಂದಿದೆ ಎಂದು ಅವರು ನಮಗೆ ತಿಳಿಸಿದರು. ಮತ್ತು ಉಲ್ಲೇಖಕ್ಕಾಗಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೇವಲ ವಿಡಿಯೋ ಒಂದೇ ಸಾಕಾಗುವುದಿಲ್ಲ, ಆದ್ದರಿಂದ ನಾವು ಕೆಲವು ಡೇಟಾವನ್ನು ಸಂಗ್ರಹಿಸಿದ್ದೇವೆ. ಇದನ್ನೂ ಓದಿ: 10.76 ಲಕ್ಷ ಪ್ರಯಾಣಿಕರಿಗೆ ದಂಡ – ಬರೋಬ್ಬರಿ 5.38 ಕೋಟಿ ಸಂಗ್ರಹಿಸಿದ BMRCL

1,634 ಕೋಟಿ ವೆಚ್ಚದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ಮಿಸಿದ 5.6 ಕಿ.ಮೀ ಬಾಂದ್ರಾ-ವರ್ಲಿ ಸೀ ಲಿಂಕ್ 2009 ರಲ್ಲಿ ಉದ್ಘಾಟನೆಯಾಗಿತ್ತು. ಆಗ ಜಾರಿ ನಿರ್ದೇಶನದ ಜಾಹೀರಾತುಗಳು ಇರಲಿಲ್ಲ. ಸೀ ಲಿಂಕ್ ಯಾವುದೇ ಜಾಹೀರಾತು ಇಲ್ಲದೇ ವ್ಯಾಪಕವಾಗಿ ಬಳಸಲ್ಪಟ್ಟಿತ್ತು. ಪ್ರತಿ ಕಾರಿಗೆ 85 ರೂ. ಶುಲ್ಕ ವಿಧಿಸುವ ಬಾಂದ್ರಾ-ವರ್ಲಿ ಸೀ ಲಿಂಕ್‌ನಿಂದ ಸಂಗ್ರಹಿಸಲಾದ ಆದಾಯವು ಮಾರ್ಚ್ 2022 ರಲ್ಲಿ 9.95 ಕೋಟಿ ರೂ. ಇತ್ತು. ಈ ವಿವರ MSRDC ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಈಗ ಅಟಲ್ ಸೇತು ಸೇತುವೆಯ ಯಶಸ್ಸನ್ನು ಪರಿಶೀಲಿಸೋಣ. 17,840 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆಯಲ್ಲಿ ಏಕಮುಖ ಸಂಚಾರಕ್ಕೆ ಪ್ರತಿ ಕಾರಿಗೆ 250 ರೂ. ಟೋಲ್ ದರವನ್ನು ನಿಗದಿಪಡಿಸಲಾಗಿದೆ. ಇದು ಬಹಳ ದುಬಾರಿಯಾಗಿದೆ. ಉದ್ಘಾಟನೆಯ ನಂತರ ಜನವರಿ 12 ಮತ್ತು ಏಪ್ರಿಲ್ 23 ರ ನಡುವಿನ 102 ದಿನಗಳಲ್ಲಿ ಒಟ್ಟು 22.57 ಕೋಟಿ ರೂ.ಸಂಗ್ರಹಿಸಲಾಗಿದೆ. ಇದು ಕೇವಲ 6.6 ಕೋಟಿ ರೂ. ಮಾಸಿಕ ಆದಾಯವಾಗಿದೆ.


ಈ ದರದಲ್ಲಿ 17,840 ಕೋಟಿ ರೂ. ಹೂಡಿಕೆಯನ್ನು ಮರುಪಡೆಯಲು 225 ವರ್ಷಗಳು ಬೇಕಾಗುತ್ತದೆ. ಆದರೆ ಅದರ ಬಡ್ಡಿಗೆ ಲೆಕ್ಕವಿಲ್ಲ. ಬಾಂದ್ರಾ-ವರ್ಲಿ ಸೀ ಲಿಂಕ್‌ಗೆ ಹೋಲಿಸಿದರೆ ಸೇತುವೆಯನ್ನು ಸರಿಸುಮಾರು 20% ವಾಹನಗಳು ಬಳಸುತ್ತಿವೆ ಎಂದು ಇದು ಸೂಚಿಸುತ್ತದೆ. ಉದ್ಘಾಟನೆಗೂ ಮುನ್ನ ಅಂದಾಜು ಮಾಸಿಕ ಆದಾಯ 30 ಕೋಟಿ ರೂ. ಇದ್ದು, ಪ್ರತಿ ತಿಂಗಳು 23.4 ಕೋಟಿ ರೂ. ಕೊರತೆಯಾಗುತ್ತಿದೆ

ಮುಂಬೈ ಜನರು ಈ ಸೇತುವೆಯನ್ನು ಏಕೆ ಬಳಸುತ್ತಿಲ್ಲ ಎಂಬುದರ ಕುರಿತು ನೀವು ವೀಡಿಯೊವನ್ನು ಮಾಡಬಹುದೇ? ಹೆಚ್ಚಿನ ಟೋಲ್ ದರಗಳು ಇದಕ್ಕೆ ಕಾರಣವೇ ಎಂದು ಪ್ರಶ್ನಿಸಿದೆ.

 

Share This Article