ನನ್ನ ವಿರುದ್ಧ ರಾಘವೇಂದ್ರ ಷಡ್ಯಂತ್ರ – ಬಂಧಿಸುವಂತೆ ಈಶ್ವರಪ್ಪ ದೂರು

Public TV
1 Min Read

ಬೆಂಗಳೂರು: ಯಡಿಯೂರಪ್ಪ (Yediyurappa) ಕುಟುಂಬದ ವಿರುದ್ಧ ಮಾಜಿ ಸಚಿವ ಕೆಎಸ್‌ಈಶ್ವರಪ್ಪ (KS Eshwarappa) ಚುನಾವಣಾ ಆಯೋಗದ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲದೇ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ (BY Raghavendra) ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

ಬಿ ವೈ ರಾಘವೇಂದ್ರ ಅವರು ಹಲವು ಚುನಾವಣಾ ಅಕ್ರಮ‌ ನಡೆಸಿದ್ದಾರೆ ಎಂದು ಆರೋಪಿಸಿ ಇಂದು ಬೆಂಗಳೂರಿನಲ್ಲಿ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಈಶ್ವರಪ್ಪ ದಾಖಲೆ ಸಮೇತ ದೂರು ಕೊಟ್ಟಿದ್ದಾರೆ. ಇದನ್ನೂ ಓದಿ: ಕಾರ್ಯಕರ್ತರ ಮುಂದೆ ರೇವಣ್ಣ ಕಣ್ಣೀರು!

 

ದೂರು ಕೊಟ್ಟ ಬಳಿಕ ಮಾತಾಡಿದ ಈಶ್ವರಪ್ಪ, ಚುನಾವಣೆ ಸೋಲುವ ಭೀತಿಯಿಂದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು ತಮ್ಮ ವಿರುದ್ಧ ಕೆಲವು ನಕಲಿ ಫೋಟೋ ಬಿಡುಗಡೆ ಮಾಡಿದ್ದಾರೆ.‌ ನನ್ನದು ಮೋದಿಯವರದ್ದು ಫೋಟೋ ಹಾಕಿ ಸುಳ್ಳು ಪ್ರಚಾರ ಮಾಡಿದ್ದಾರೆ. ನಾನು ಸುದ್ದಿಗೋಷ್ಠಿ ಮಾಡುವ ರೀತಿ ನಕಲಿ ಫೋಟೋ ಹಂಚಿ ನನ್ನ ವಿರುದ್ಧ ಚುನಾವಣೆಯಲ್ಲಿ ಸಂಪೂರ್ಣ ಮೋಸ ಮತ್ತು ಅಪಪ್ರಚಾರ ಮಾಡಿದ್ದಾರೆ ಎಂದು ದೂರಿದ್ದಾರೆ.

ರಾಘವೇಂದ್ರ ಅವರು ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಕೂಡಲೇ ರಾಘವೇಂದ್ರರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ದೂರು‌ ಕೊಟ್ಟಿರುವುದಾಗಿ ಈಶ್ವರಪ್ಪ ತಿಳಿಸಿದರು. ನಾನು ಸಾಯುವ ತನಕ ಬಿಜೆಪಿಯಲ್ಲೇ ಇರುತ್ತೇನೆ. ಇವರು ನನ್ನನ್ನು ತಾತ್ಕಾಲಿಕವಾಗಿ ಹೊರಗೆ ಹಾಕಿರಬಹುದು. ಅವರ ಉಚ್ಛಾಟನೆಯನ್ನು ನಾನು ತಲೆಯಲ್ಲಿ ಇಟ್ಟುಕೊಂಡಿಲ್ಲ. ಬಿಜೆಪಿ ನನ್ನ ತಾಯಿ ಇದ್ದಂತೆ. ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ. ಮೋದಿಯವರ ಪರ ಕೈ ಎತ್ತುತ್ತೇನೆ ಎಂದು ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.

Share This Article