IPL 2024: ರಾಜಸ್ಥಾನ್ ರಾಯಲ್ಸ್​ ವಿರುದ್ಧ ಗೆದ್ದು ಬೀಗಿದ ಡೆಲ್ಲಿ ಕ್ಯಾಪಿಟಲ್ಸ್​

Public TV
1 Min Read

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ತಂಡ 20 ರನ್‌ಗಳ ಭರ್ಜರಿ ಜಯಗಳಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 221 ರನ್ ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 201 ರನ್‌ಗಳನ್ನು ಮಾತ್ರ ಕಲೆಹಾಕಲು ಶಕ್ತವಾಯಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ ಮೊದಲನೇ ಓವರ್‌ನ 4ನೇ ಎಸೆತದಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ತಂಡದ ಪರ ನಾಯಕ ಸಂಜು ಸ್ಯಾಮ್ಸನ್ 46 ಎಸೆತಗಳಲ್ಲಿ 6 ಸಿಕ್ಸರ್‌, 8 ಬೌಂಡರಿ ಚಚ್ಚಿ 86 ರನ್‌ ದಾಖಲಿಸಿ ಔಟಾದರು. ರಿಯಾನ್ ಪರಾಗ್ 22 ಎಸೆತಗಳಲ್ಲಿ 22 ರನ್‌ ಕಲೆ ಹಾಕಿ ಪೆವಿಲಿಯನ್‌ಗೆ ಮರಳಿದರು. ಶುಭಂ ದುಬೆ 12 ಎಸೆತಗಳಲ್ಲಿ 25 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಡೆಲ್ಲಿ ಪರ ಖಲೀಲ್ ಅಹ್ಮದ್, ಕುಲ್ದೀಪ್ ಯಾದವ್ ಮುಖೇಶ್‌ ಕುಮಾರ್‌ ತಲಾ 2, ಅಕ್ಷರ್ ಪಟೇಲ್, ರಾಸಿಖ್ ಸಲಾಂ ತಲಾ ಒಂದೊಂದು ವಿಕೆಟ್‌ ಪಡೆದರು.

ಡೆಲ್ಲಿ ಪರ ಅಭಿಷೇಕ್ ಪೊರೆಲ್ 36 ಎಸೆತಗಳಲ್ಲಿ 3 ಸಿಕ್ಸರ್‌, 7 ಬೌಂಡರಿ ಸಿಡಿಸಿ 65 ರನ್ ಗಳಿಸಿ ಗಮನ ಸೆಳೆದರು. ಜೇಕ್ ಫ್ರೇಸರ್ 20 ಎಸೆತಗಳಲ್ಲಿ 3 ಸಿಕ್ಸರ್‌, 7 ಬೌಂಡರಿ ನೆರವಿನಿಂದ 50 ರನ್‌ ಕಲೆ ಹಾಕಿದರು. ಟ್ರಿಸ್ಟಾನ್ ಸ್ಟಬ್ಸ್ 20 ಎಸೆತಗಳಲ್ಲಿ ತಲಾ 3 ಸಿಕ್ಸರ್‌ ಹಾಗೂ ಬೌಂಡರಿ ನೆರವಿನಿಂದ ತಂಡಕ್ಕೆ 41 ರನ್‌ಗಳ ಕೊಡುಗೆ ನೀಡಿದರು.

ರಾಜಸ್ಥಾನ ಪರ ಅಶ್ವಿನ್ 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಹಲ್ ತಲಾ ಒಂದೊಂದು ವಿಕೆಟ್‌ ಕಿತ್ತರು.

Share This Article