ಕಿಚ್ಚನಿಗೆ ವಿಶೇಷ ಉಡುಗೊರೆ ಕೊಟ್ಟ ರಾಜಸ್ಥಾನ್‌ ರಾಯಲ್ಸ್‌ – ಧನ್ಯವಾದ ಹೇಳಿದ ಸುದೀಪ್‌

Public TV
2 Min Read

ಜೈಪುರ: ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ತಂಡವು ನಟ ಕಿಚ್ಚ ಸುದೀಪ್‌ ಅವರಿಗೆ ರಾಜಸ್ಥಾನ್‌ ತಂಡದ ಜೆರ್ಸಿಯನ್ನು (Rajasthan Royals Jersey) ಉಡುಗೊರೆಯಾಗಿ ಕಳುಹಿಸಿಕೊಟ್ಟಿದೆ.

ಕಡುನೀಲಿ ಮತ್ತು ತಿಳಿಗೆಂಪು (ಪಿಂಕ್‌) ಮಿಶ್ರಿತ ಬಣ್ಣದ ಜೆರ್ಸಿ ಇದಾಗಿದೆ. ಜೆರ್ಸಿ ಹಿಂಭಾಗದಲ್ಲಿ ಸುದೀಪ್‌ (Kichcha Sudeepa) ಎಂದು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಈ ಜೆರ್ಸಿ ಫೋಟೋವನ್ನು ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್‌ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ.

ರಾಜಸ್ಥಾನ್‌ನೊಂದಿಗೆ ಅವಿನಾಭಾವ ಸಂಬಂಧ:
ಕ್ರಿಕೆಟ್‌ ಎಂದರೆ ಸುದೀಪ್‌ಗೆ ತುಂಬಾ ಅಚ್ಚುಮೆಚ್ಚು. ಬಾಲ್ಯದಿಂದಲೂ ಕ್ರಿಕೆಟ್‌ನ ಜೊತೆ ಉತ್ತಮ ನಂಟು ಹೊಂದಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಸುದೀಪ್‌, ಸಿಸಿಎಲ್, ಕೆಪಿಎಲ್ ಟೂರ್ನಿಗಳಲ್ಲಿ ಕರ್ನಾಟಕ ಬುಲ್ಡೋಜರ್ ತಂಡವನ್ನು ಮುನ್ನಡೆಸಿದ್ದಾರೆ. ಅಲ್ಲದೇ ರಾಜಸ್ಥಾನ್‌ ರಾಯಲ್ಸ್‌ ತಂಡದೊಂದಿಗೆ ಮೊದಲಿನಿಂದಲೂ ಸುದೀಪ್‌ ಅವಿನಾಭಾವ ಸಂಬಂಧ ಹೊಂದಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡ ಈ ಹಿಂದೆಯೂ ಕಿಚ್ಚ ಸುದೀಪ್‌ ಅವರ 50ನೇ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭ ಕೋರಿತ್ತು. ಸುದೀಪ್‌ ಅವರಿಗೆ ವಿಶೇಷ ಜೆರ್ಸಿಯೊಂದಿಗೆ ವಿಶ್‌ ಕಾರ್ಡ್‌ ಮಾಡಿ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿತ್ತು.

ಬ್ಯಾಟ್‌ ಗಿಫ್ಸ್‌ ಕೊಟ್ಟಿದ್ದ ಜೋಸ್‌:
2022ರ ಐಪಿಎಲ್‌ ಟೂರ್ನಿಯಲ್ಲಿ 863 ರನ್‌ ಬಾರಿಸುವ ಮೂಲಕ ಆವೃತ್ತಿಯ ಆರೆಂಜ್‌ ಕ್ಯಾಪ್‌ ವಿನ್ನರ್‌ ಆಗಿದ್ದ ಜೋಸ್‌ ಬಟ್ಲರ್‌, ನೆನಪಿನ ಕಾಣಿಕೆಯಾಗಿ ಸುದೀಪ್‌ಗೆ ರನ್‌ ಬಾರಿಸಿದ್ದ ಬ್ಯಾಟನ್ನೇ ಉಡುಗೊರೆಯಾಗಿ ಕೊಟ್ಟಿದ್ದರು. ಇದೀಗ ರಾಜಸ್ಥಾನ್‌ ರಾಯಲ್ಸ್‌ ತಂಡ ಮತ್ತೊಮ್ಮೆ ಜೆರ್ಸಿಯನ್ನು ಸುದೀಪ್‌ಗೆ ಉಡುಗೊರೆಯಾಗಿ ನೀಡಿದೆ.

ಧನ್ಯವಾದ ಹೇಳಿದ ಸುದೀಪ್‌:
ಜೆರ್ಸಿಯ ಚಿತ್ರಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್‌ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ತುಂಬು ಹೃದಯದ ಧನ್ಯವಾದ ಹೇಳಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಧನ್ಯವಾದಗಳು. ವರ್ಷ-ವರ್ಷವೂ ನಿಮ್ಮ ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತಿದೆ. ತಂಡಗಳ ಅದ್ಭುತ ಪ್ರದರ್ಶನಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಅಗ್ರಸ್ಥಾನದಲ್ಲಿ ರಾಜಸ್ಥಾನ:
2023ರ ಆವೃತ್ತಿಯಲ್ಲಿ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ 2024ರ ಆವೃತ್ತಿಯಲ್ಲಿ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ. 10 ಪಂದ್ಯಗಳಲ್ಲಿ ಕೇವಲ 2ರಲ್ಲಿ ಸೋತಿರುವ ರಾಜಸ್ಥಾನ್‌ +0.622 ನೆಟ್‌ ರನ್‌ರೇಟ್‌ ಹಾಗೂ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

Share This Article