ಕಾಂಗ್ರೆಸ್‌ಗೆ ತನ್ನ ಸದಸ್ಯನ ಮಗಳನ್ನೇ ರಕ್ಷಣೆ ಮಾಡೋಕೆ ಆಗ್ಲಿಲ್ಲ: ನೇಹಾ ಹತ್ಯೆ ಖಂಡಿಸಿದ ಮೋದಿ

Public TV
3 Min Read

– ನಾನಿಲ್ಲಿ ಬಂದಿರುವುದು ನೇಹಾರಂಥ ಕೋಟಿ ಹೆಣ್ಣುಮಕ್ಕಳ ರಕ್ಷಣೆಗಾಗಿ
– ಬಳ್ಳಾರಿಯ ಜೀನ್ಸ್ ಮೇಡ್ ಇನ್ ಇಂಡಿಯಾ ಲೇಬಲ್ ಪಡೆಯಲಿದೆ

ಬಳ್ಳಾರಿ: ಕಾಂಗ್ರೆಸ್‌ಗೆ ತನ್ನ ಸದಸ್ಯನ ಮಗಳನ್ನೇ ರಕ್ಷಣೆ ಮಾಡುವುದಕ್ಕೆ ಆಗಲಿಲ್ಲ. ನೇಹಾಳನ್ನು ಅಮಾನುಷವಾಗಿ ಇರಿದು ಹತ್ಯೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಖಂಡನೆ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ (Ballari) ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ. ಹುಬ್ಬಳ್ಳಿಯ ಕಾಲೇಜಿನಲ್ಲಿ ಹಾಡಹಗಲೇ ಮಗಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅಂತಹ ಚಟುವಟಿಕೆಗಳಲ್ಲಿ ತೊಡಗಿರುವ ಜನರು ಹೆದರುವುದಿಲ್ಲ. ಕುಟುಂಬ ಆತಂಕದಲ್ಲಿದೆ. ಇದು ಕಾಂಗ್ರೆಸ್ ನೀತಿಯ ಫಲ. ಕೆಫೆಯಲ್ಲಿ ಬ್ಲಾಸ್ಟ್ ಆದಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ ಎಂಬುದು ಅವರ ಮೊದಲ ಹೇಳಿಕೆಯಾಗಿತ್ತು. ಆಗ ವ್ಯಾಪಾರ ವೈಷಮ್ಯವೇ ಕಾರಣ ಎಂದರು. ಕೊನೆಗೂ ಎನ್‌ಐಎ ತನಿಖೆಯಿಂದ ಆತಂಕಕಾರಿ ವಿಚಾರಗಳು ಬೆಳಕಿಗೆ ಬಂದವು. ಪಶ್ಚಿಮ ಬಂಗಾಳದಿಂದ ಆರೋಪಿಗಳನ್ನು ಬಂಧಿಸಲಾಗಿದೆ. ನೇಹಾ ಮಾಡಿದ ತಪ್ಪಾದರೂ ಏನು? ವೋಟ್ ಬ್ಯಾಂಕ್‌ಗಾಗಿ ಹಸಿದ ಸರ್ಕಾರ ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನೇಹಾ ಬದಲು ಮುಸ್ಲಿಂ ಸಾವಾಗಿದ್ರೆ ಸಿಎಂ ಹೆಲಿಕಾಪ್ಟರ್ ಇಳಿಸ್ತಿದ್ರು: ಯತ್ನಾಳ್

ನಾನಿಲ್ಲಿ ಬಂದಿರುವುದು ನನಗಾಗಿ ಅಲ್ಲ. ನೇಹಾ ಅವರಂತಹ ಕೋಟಿ ಹೆಣ್ಣುಮಕ್ಕಳ ರಕ್ಷಣೆಗಾಗಿ. ಬಾಂಬ್ ಸ್ಫೋಟದ ಮನಸ್ಥಿತಿಯನ್ನು ಹೊಂದಿರುವ ಅವರನ್ನು ಕಳಿಸಬೇಕಾದ ಜಾಗಕ್ಕೆ ಕಳಿಸಲು ನಾನು ಇಲ್ಲಿದ್ದೇನೆ. 2014 ಕ್ಕಿಂತ ಮೊದಲು ದಿನಕ್ಕೊಂದು ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು. ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದ್ದ ನಮ್ಮ ನೆರೆಹೊರೆಯವರು ಈಗ ಹಿಟ್ಟು ಆಮದು ಮಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಈ ಬದಲಾವಣೆ ಮೋದಿಯಿಂದಲ್ಲ, ನಿಮ್ಮ ಮತದಿಂದ. 140 ಕೋಟಿ ಭಾರತೀಯರು ನನ್ನ ಕುಟುಂಬ ಎಂದು ಹೇಳಿದರು.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ ಇನ್ನೂ ಭೇಟಿ ನೀಡದ ನಿಮ್ಮಲ್ಲಿ ಯಾರಾದರೂ ಕುಟುಂಬ ಸಮೇತ ಅಲ್ಲಿಗೆ ಹೋಗಲು ಬಯಸುತ್ತೀರಾ? ಪ್ರಾಣ ಪ್ರತಿಷ್ಠಾನಕ್ಕೆ ನೀಡಿದ್ದ ಆಹ್ವಾನವನ್ನು ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ನಾಯಕರು ತಿರಸ್ಕರಿಸಿದರು. ಇದು ಭಗವಾನ್ ರಾಮನಿಗೆ ಆದ ಅವಮಾನ ಅಷ್ಟೇ ಅಲ್ಲ. 500 ವರ್ಷಗಳ ಸುದೀರ್ಘ ಹೋರಾಟಕ್ಕೆ ಮಾಡಿದ ಅವಮಾನವೂ ಹೌದು. ಹನುಮಂತನ ಈ ನಾಡು ಕಾಂಗ್ರೆಸ್ ಅನ್ನು ಕ್ಷಮಿಸಬಹುದೇ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ರಾಮ ಮಂದಿರ ನಿರ್ಮಾಣ ಮಾಡದಂತೆ ಕಾಂಗ್ರೆಸ್‌, ಹಿಂಬಾಲಕರಿಂದ ಕುತಂತ್ರ: ಮೋದಿ

ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷಕ್ಕೆ ನಾ ಹೇಳುವೆ. ನೀವು ಎಷ್ಟೇ ಪ್ರಯತ್ನ ಪಟ್ಟರೂ, ಭಾರತ ವಿಕಸಿತ ಭಾರತ ಆಗಲಿದೆ. ಇದನ್ನು ನೀವು ತಡೆಯಲು ಎಷ್ಟು ಪ್ರಯತ್ನ ಪಟ್ಟರು ಆಗಲ್ಲಾ. ಕಲ್ಯಾಣ ಕರ್ಣಾಟಕದ ಅಭಿವೃದ್ಧಿಗೆ ಬಿಜೆಪಿ ಮಾನ್ಯತೆ ನೀಡಿದೆ. ಕಲ್ಯಾಣ ಕರ್ಣಾಟಕದಲ್ಲಿ ರಸ್ತೆ ಅಭಿವೃದ್ಧಿ ಅತೀ ವೇಗದಲ್ಲಿ ನಡೆಯುತ್ತಿದೆ. ಕಲ್ಯಾಣ ಕರ್ಣಾಟಕದ ಚಿತ್ರಣವನ್ನು ಬದಲಾವಣೆ ಮಾಡುತ್ತವೆ. ಬಳ್ಳಾರಿಯಲ್ಲಿ ಜೀನ್ಸ್ ಹಾಗೂ ಸ್ಟೀಲ್ ಹಬ್ ಮಾಡುತ್ತೇವೆ. ಬಳ್ಳಾರಿಯ ಜೀನ್ಸ್ ಮೇಡ್ ಇನ್ ಇಂಡಿಯಾ ಲೇಬಲ್ ಪಡೆಯಲಿದೆ ಎಂದರು.

ಈ ಮೊದಲ ಮಕ್ಕಳ ಆಟಿಗೆ ವಸ್ತುಗಳನ್ನು ಭಾರತ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ನಮ್ಮ ಸರ್ಕಾರ ಬಂದ ಬಳಿಕ ವಿದೇಶಕ್ಕೆ ನಾವು ಆಟಿಕೆ ವಸ್ತುಗಳ ರಫ್ತು ಮಾಡುತ್ತಿದ್ದೇವೆ. ಕಾಂಗ್ರೆಸ್ ದೇಶದ ಅಭಿವೃದ್ಧಿ ಬೇಕಿಲ್ಲಾ. ಯಾರು ಎಲ್ಲಿ ಇದ್ದಾರೆ ಅವರು ಅಲ್ಲೇ ಇರಬೇಕು. ಅವರಿಗೆ ದೇಶದ ಅಭಿವೃದ್ಧಿ ಬೇಕಿಲ್ಲಾ. ಒಂದು ಕಡೆ ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಕೈಗಾರಿಕಾ ಅಭಿವೃದ್ಧಿ ಕುಂಟಿತ ಮಾಡಿದೆ. ಕಾಂಗ್ರೆಸ್ ವೋಟ್ ಬ್ಯಾಂಕ್‌ಗಾಗಿ ಏನಾದರೂ ಮಾಡಲು ಸಿದ್ಧ. ದೇಶದ ಸಣ್ಣ ಸಣ್ಣ ಮಕ್ಕಳಿಗೆ ಗೊತ್ತು. ದೇಶದಲ್ಲಿ ಒಂದು ಸಂಘಟನೆ ಇದೆ. ಅದನ್ನು ನಾವು ಬ್ಯಾನ್ ಮಾಡಲು ಮುಂದಾದೆವು. ಪಿಎಫ್‌ಐ ಬ್ಯಾನ್ ಮಾಡಿದ್ದೇವೆ. ಏನೇ ಆದರೂ ಅದರ ಜಾಲ ಬೆಳೆಯಲು ನಾವು ಬಿಡಲಿಲ್ಲ. ದೇಶದ ಮಾರಕವಾದ ಪಿಎಫ್‌ಐ ಕಾಂಗ್ರೆಸ್ ಲೈಫ್ ಲೈನ್ ಆಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಬಿಜೆಪಿಗೂ ಬಳ್ಳಾರಿಗೂ ಅವಿನಾಭಾವ ಸಂಬಂಧ ಇದೆ. ಈ ಹಿಂದೆ ಇಲ್ಲಿ ಶುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದರು. ಆದರೆ ಚುನಾವಣೆಯಲ್ಲಿ ಅವರು ಸೋತರೂ ಬಳ್ಳಾರಿ ಬಿಡಲಿಲ್ಲ. ಕೊನೆಯವರೆಗೂ ಅವರು ಇಲ್ಲಿ ಬಂದು ಹೋಗಿದ್ದಾರೆ. ಆದರೆ ಇಲ್ಲಿಂದ ಗೆದ್ದು ಹೋದ ಸೋನಿಯಾ ಗಾಂಧಿ, ಗೆದ್ದ ಮೇಲೆ ಒಂದು ಸಾರಿಯೂ ತಿರುಗಿ ನೋಡಲಿಲ್ಲ. ಇಲ್ಲಿ ಇರುವ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಜನತೆಗೆ ಮನವಿ ಮಾಡಿದರು.

ಭಾಷಣಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ಬಿ.ವೈ.ವಿಜಯೇಂದ್ರ, ಹೆಚ್.ಡಿ.ಕುಮಾರಸ್ವಾಮಿ ಸನ್ಮಾನಿಸಿದರು. ಮೋದಿ ಅವರಿಗೆ ಮಹಿಳಾ ಕಾರ್ಯಕರ್ತರು ಸ್ಮರಣಿಕೆ ನೀಡಿ ಅಭಿನಂದಿಸಿದರು.

Share This Article