ಟ್ರಕ್, ಬಸ್ ಮಧ್ಯೆ ಭೀಕರ ಅಪಘಾತ – 6 ಮಂದಿ ದುರ್ಮರಣ

Public TV
1 Min Read

ಲಕ್ನೋ: ವೇಗವಾಗಿ ಬಂದ ಟ್ರಕ್ (Truck) ಬಸ್‌ಗೆ (Bus) ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ 6 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ (Uttar Pradesh) ಸಫಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹರ್ದೋಯ್-ಉನ್ನಾವೋ (Unnao) ರಸ್ತೆಯ ಜಮಾಲ್ದಿಪುರ್ ಗ್ರಾಮದ ಬಳಿ ಅಪಘಾತ (Accident) ಸಂಭವಿಸಿದ್ದು, ಘಟನೆಯ ಬಳಿಕ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಫಿಪುರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಗಾಯಾಳುಗಳನ್ನು ಉನ್ನಾವೋ ಮತ್ತು ಕಾನ್ಪುರದ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಲ್ ಆಫೀಸರ್ ಸಫಿಪುರ್ ರಿಷಿಕಾಂತ್ ಶುಕ್ಲಾ ತಿಳಿಸಿದ್ದಾರೆ. ಬಸ್‌ನಲ್ಲಿ ಒಟ್ಟು 35 ಮಂದಿ ಪ್ರಯಾಣಿಕರಿದ್ದರು ಎಂದು ಶುಕ್ಲಾ ಹೇಳಿದ್ದಾರೆ.

ಗಾಯಗೊಂಡ 20 ಮಂದಿಯಲ್ಲಿ 11 ಮಂದಿಯನ್ನು ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, 9 ಮಂದಿಯನ್ನು ಉನ್ನಾವೋದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಕೆಲವು ಪ್ರಯಾಣಿಕರನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಸಿಒ ತಿಳಿಸಿದ್ದಾರೆ. ಮೃತರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎಂದು ವರದಿಗಳು ತಿಳಿಸಿವೆ.

Share This Article