ಮೊದಲ ಹಂತದ ಮತದಾನ: 716 ಕೋಟಿ ಆಸ್ತಿ ಒಡೆಯ – ʻಕೈʼನಾಯಕ ನಂ.1 ಶ್ರೀಮಂತ ಅಭ್ಯರ್ಥಿ!

Public TV
2 Min Read

– ಬಡ ಅಭ್ಯರ್ಥಿ ಬಳಿಯಿದೆ ಕೇವಲ 320 ರೂ.

ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಇಂದು ಲೋಕಸಭೆ ಚುನಾವಣೆ (Lok Sabha Elections 2024) ಮೊದಲ ಹಂತದ ಮತದಾನ ನಡೆಯುತ್ತಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ (Voting) ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಶುರುವಾಗಿದ್ದು, ಎಲ್ಲೆಡೆ ಜನ ಉತ್ಸಾಹದಿಂದಲೇ ಮತದಾನ ಮಾಡ್ತಿದ್ದಾರೆ.

ಈ ಮೊದಲ ಹಂತ ಚುನಾವಣೆಯಲ್ಲಿ ಒಂದೆಡೆ ಶ್ರೀಮಂತರಿದ್ದರೆ, ಮತ್ತೊಂದೆಡೆ ಬಡ ಅಭ್ಯರ್ಥಿಗಳು ಕಣಕ್ಕಿಳಿದಿರುವುದು ವಿಶೇಷ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms)  1,625 ಅರ್ಥಿಗಳ ಪೈಕಿ 1,618 ಅಭ್ಯರ್ಥಿಗಳ ಆಸ್ತಿ ವಿವರ ಬಿಡುಗಡೆಯಾಗಿದೆ. ಅವರಲ್ಲಿ 10 ಮಂದಿ ತಮ್ಮ ಆಸ್ತಿಯನ್ನು ಶೂನ್ಯ ಎಂದು ಘೋಷಿಸಿದ್ದಾರೆ. 450 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು 1 ಕೋಟಿ ರೂ.ಗಿಂತಲೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ವರದಿಗಳು ತೋರಿಸಿವೆ.

ಮಧ್ಯಪ್ರದೇಶದ ಚಿಂದ್ವಾರದ ಹಾಲಿ ಸಂಸದ ಕಾಂಗ್ರೆಸ್‌ನ ನಕುಲ್ ನಾಥ್ (Nakul Nath) ಅವರು ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ನಕುಲ್‌ ನಾಥ್‌ ಸರಿಸುಮಾರು 716 ಕೋಟಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ಮಧ್ಯಪ್ರದೇಶದ ಮಾಜಿ ಸಿಎಂ ಪುತ್ರನೂ ಆಗಿರುವ ನಕುಲ್‌ ನಾಥ್‌ 2019ರ ಲೋಕಸಭೆ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು.

ಕೋಟ್ಯಧಿಪತಿಗಳು ಯಾರು?
ಮೊದಲ ಹಂತದ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ನಕುಲ್‌ ನಾಥ್‌ ಅತ್ಯಂತ ಶ್ರೀಮಂತ (716 ಕೋಟಿ ರೂ.) ಅಭ್ಯರ್ಥಿಯಾಗಿದ್ದಾರೆ. ಅಲ್ಲದೇ ತಮಿಳುನಾಡಿನ ಈರೋಡ್‌ನಿಂದ ಸ್ಪರ್ಧಿಸಿರುವ ಎಐಎಡಿಎಂಕೆಯ ಅಶೋಕ್ ಕುಮಾರ್ 662 ಕೋಟಿ ರೂ., ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿಯ ದೇವನಾಥನ್ ಯಾದವ್ 304 ಕೋಟಿ ರೂ., ಉತ್ತರಾಖಂಡದ ತೆಹ್ರಿ ಗರ್ವಾಲ್‌ನಿಂದ ಕಣಕ್ಕಿಳಿದಿರುವ ಬಿಜೆಪಿಯ ಮಾಲಾ ರಾಜ್ಯ ಲಕ್ಷ್ಮಿ ಶಾ 206 ಕೋಟಿ ರೂ., ಉತ್ತರ ಪ್ರದೇಶದ ಸಹರಾನ್‌ಪುರದಿಂದ ಸ್ಪರ್ಧಿಸಿರುವ 159 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ, ಕಾಂಗ್ರೆಸ್‌ನ ಹಾಲಿ ಸಂಸದ ಕಾರ್ತಿ ಚಿದಂಬರಂ 96 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ.

ಬಡ ಅಭ್ಯರ್ಥಿಗಳ ಪಟ್ಟಿಯಲ್ಲಿ ಯಾರಿದ್ದಾರೆ.
ತಮಿಳುನಾಡಿನ ತೂತುಕುಡಿ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಪೊನ್‌ರಾಜ್ ಕೇವಲ 320 ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದ ರಾಮ್‌ಟೆಕ್ ಕ್ಷೇತ್ರ ಮತ್ತು ತಮಿಳುನಾಡಿನ ಚೆನ್ನೈ ಉತ್ತರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಗಳಾದ ಕಾರ್ತಿಕ್ ಗೆಂದ್ಲಾಜಿ ಡೋಕೆ ಮತ್ತು ಸೂರ್ಯಮುತ್ತು ತಲಾ 500 ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

Share This Article