ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಕಿಡಿ

Public TV
2 Min Read

ಬೆಂಗಳೂರು: ವಿದ್ಯಾರಣ್ಯಪುರದಲ್ಲಿ ರಾಮನವಮಿ ದಿನದಂದು ಜೈ ಶ್ರೀರಾಮ್ (Jai Shri Ram) ಎಂದು ಘೋಷಣೆ ಕೂಗಿದ್ದನ್ನು ವಿರೋಧಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಆರ್.ಅಶೋಕ್ (R.Ashok), ಕಾಂಗ್ರೆಸ್ ಸರ್ಕಾರದಲ್ಲಿ ಯಾವುದು ನಿಷಿದ್ಧ? ಭಾರತ್ ಮಾತಾ ಕೀ ಜೈ ಮತ್ತು ಜೈ ಶ್ರೀರಾಮ್. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದಕ್ಕೆ ಅನುಮತಿ? ಪಾಕಿಸ್ತಾನ ಜಿಂದಾಬಾದ್ ಮತ್ತು ಅಲ್ಲಾಹು ಅಕ್ಬರ್ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಇಂಥದ್ದೊಂದು ಅಧಿಸೂಚನೆ ಹೊರಡಿಸಿದರೂ ಅಚ್ಚರಿಯಿಲ್ಲ ಎಂದು ಚಾಟಿ ಬೀಸಿದ್ದಾರೆ.

ಪ್ರಕರಣವನ್ನು ಖಂಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal), ನಿನ್ನೆ ಬೆಂಗಳೂರಿನಲ್ಲಿ ಶ್ರೀರಾಮನವಮಿಯ ಪ್ರಯುಕ್ತ ಕಾರಿನಲ್ಲಿ ಶ್ರೀರಾಮ ಘೋಷಣೆ ಕೂಗುತ್ತ ಹೊರಟಿದ್ದ ಹಿಂದೂಗಳನ್ನು ನಿಲ್ಲಿಸಿ ಅವರ ಮೇಲೆ ಹಲ್ಲೆ ಮಾಡಿದವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಈ ಘಟನೆ ತಾಜಾ ಉದಾಹರಣೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಅಂದಿದ್ದಕ್ಕೆ ಕಿರಿಕ್- ಅಲ್ಲಾಹು ಮಾತ್ರ ಕೂಗಬೇಕು ಅಂತೇಳಿ ಅಟ್ಯಾಕ್

ಹಿಂದೂ ಹಬ್ಬಗಳಂದು ಬೇರೆ ಕೋಮಿನವರ ಅನುಮತಿ ಕೋರಿ ಘೋಷಣೆ ಕೂಗುವುದು, ಶ್ರೀರಾಮನ ಧ್ವಜ, ಅಲಂಕಾರಿಕ ವಸ್ತುಗಳನ್ನು ಹಾಕಿದರೆ ಕೀಳುವುದು, ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುತ್ತೆ ಅಂತ ಹೇಳುವುದು ಕಾಕತಾಳೀಯವೋ, ಸರ್ಕಾರದಿಂದ ಪ್ರೇರಿತವೋ ಹೇಳಬೇಕು. ಒಟ್ಟಿನಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲಿ ಈ ರೀತಿಯಾದ ಹಿಂದೂಗಳ ಮೇಲೆ ಹಲ್ಲೆ ಹೆಚ್ಚಾಗಿ ಒಂದು ಕೋಮಿನವರು ತಮ್ಮ ಪ್ರಾಬಲ್ಯ ಬೀರುತ್ತಿರುವುದು ಸತ್ಯ ಎಂದು ಕಿಡಿಕಾರಿದ್ದಾರೆ.

Share This Article