ಮಹಿಳೆಯರನ್ನ ಅವಮಾನಿಸಿಲ್ಲ – ಹೆಣ್ಣುಮಕ್ಕಳ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ

By
2 Min Read

– ಕಂಗನಾ ರಣಾವತ್ ಬಗ್ಗೆ ಏನ್ ಮಾತಾಡಿದ್ರಿ? – ಕೈ ನಾಯಕರಿಗೆ ಹೆಚ್‌ಡಿಕೆ ಪ್ರಶ್ನೆ
– ಹೇಮಮಾಲಿನಿಗೆ ಏನ್‌ ಹೇಳಿದ್ರಿ ಎಲ್ಲವೂ ಗೊತ್ತಿದೆ ಎಂದು ಟಾಂಗ್‌ ಕೊಟ್ಟ ಮಾಜಿ ಸಿಎಂ

ಬೆಂಗಳೂರು: ನಾನು ಹೆಣ್ಣುಮಕ್ಕಳನ್ನು ಅವಮಾನಿಸಿಲ್ಲ. ಮಹಿಳೆಯರ ಬದುಕು ಸರಿಪಡಿಸಬೇಕು ಅಂತ ಹೇಳಿದ್ದೇನೆ. ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದೇನೆ. ಆದ್ರೆ ಕಾಂಗ್ರೆಸ್‌ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನ ಬಳಸಿಕೊಂಡಿದ್ದಾರೆ. ನನ್ನ ಹೇಳಿಕೆಯಿಂದ ಮಹಿಳೆಯರಿಗೆ ದುಃಖ ಆಗಿದ್ದರೆ ಈಗಲೂ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ನಾನು ತುಮಕೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದೆ. ಆ ಸಭೆಯಲ್ಲಿ ಹಲವಾರು ವಿಷಯಗಳನ್ನ ಪ್ರಸ್ತಾಪ ಮಾಡಿದ್ದೆ. ಮಹಿಳಾ ತಾಯಂದಿರ ಬಗ್ಗೆ ಕ್ಷಮೆ ಕೇಳಲು ಆಗದ ರೀತಿ ಅಪಮಾನ ಮಾಡಿದ್ದೇನೆ ಅಂತ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ತರಾತುರಿಯಲ್ಲಿ ಝೂಮ್ ಮೀಟಿಂಗ್ ಮಾಡಿದ್ದಾರೆ. ಇಂದಿರಾಗಾಂಧಿ ಹತ್ಯೆಯಾದ ಸಮಯದಲ್ಲಿ ದುಃಖಪಟ್ಟಿದ್ದು ಬಿಟ್ಟು ಈಗಲೇ ದುಃಖಪಟ್ಟೆ ಅಂತ ಅಧ್ಯಕ್ಷರು, ಮಹಿಳೆಯರ ಪರ ಕಂಬನಿ ಮಿಡಿದಿದ್ದಾರೆ. ಡಿಕೆ ಶಿವಕುಮಾರ್‌ಗೆ ಕೇಳ್ತೀನಿ, ಕೆಲವು ಹೆಣ್ಣುಮಕ್ಕಳನ್ನ ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಂಡಾಗ ಇವರಿಗೆ ದುಃಖ ಬಂದಿಲ್ಲ ಪಾಪ. ದೆಲ್ಲವನ್ನು ನಾನು ಕಂಡಿದ್ದೇನೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ದು ಪಿಕ್‌ಪಾಕೆಟ್‌ ಗ್ಯಾರಂಟಿ: ಕಾಂಗ್ರೆಸ್ ನೀಡಿರುವ 5 ಗ್ಯಾರಂಟಿ ಪಿಕ್ ಪ್ಯಾಕೇಟ್ ಗ್ಯಾರಂಟಿ. ಕಾಂಗ್ರೆಸ್ ಸಚಿವರು, ನಾಯಕರು, ಮಹಿಳಾ ಘಟಕದವರು ಮಂಡ್ಯದಲ್ಲಿ `ಗೋ ಬ್ಯಾಕ್ ಕುಮಾರಸ್ವಾಮಿ’ ಅಂತ ಮಾಡಿದ್ದಾರೆ. ಅಲ್ಲಿಗೆ ಬಂದು ಹೆಣ್ಣುಮಕ್ಕಳನ್ನ ಕೇಳಿದ್ರೆ ಯಾಕೆ ಬಂದಿದ್ದೇವೆ ಗೊತ್ತಿಲ್ಲ ಅಂತ ಹೇಳ್ತಾರೆ. ಮಿಸ್ಟರ್ ಶಿವಕುಮಾರ್ ನಿಮ್ಮ ಉಸ್ತುವಾರಿ ಇದ್ದಾರೆ ಅಲ್ಲವಾ? ಆ ಮನುಷ್ಯ ಏನ್ ಹೇಳಿಕೊಟ್ರು? ಹೇಮಮಾಲಿನಿ ವಿರುದ್ಧ ಸುರ್ಜೇವಾಲಾ ಅವರು ಏನ್‌ ಹೇಳಿದ್ದರು? ಅದನ್ನ ಕನ್ನಡದಲ್ಲಿ ಓದೋಕೆ ಆಗಲ್ಲ. ಅದೆಲ್ಲ ಮಹಿಳೆಯರಿಗೆ ಗೌರವ ಕೊಡುವ ಹೇಳಿಕೆಗಳಾ? ಎಂದು ಪ್ರಶ್ನಿಸಿದ್ದಾರೆ.

ಸಾವಿರಾರು ಕೋಟಿ ಆಫರ್‌ ಬಂದಿತ್ತು:  ನನ್ನ ಹೇಳಿಕೆ ನನ್ನ ಸಂಸ್ಕೃತಿ ತೋರಿಸುತ್ತೆ ಅಂತ ಹೇಳ್ತಾರೆ, 2 ಸಾವಿರ ಇವರು ಕೊಟ್ಟು ನಿಮ್ಮ ಯಜಮಾನರ ಜೇಬಿಂದ 5 ಸಾವಿರ ಕೀಳುತ್ತಿದ್ದಾರೆ. ಇದರಿಂದ ಎಚ್ಚರವಾಗಿರಿ ಅಂತ ನಾನು ಹೇಳಿದ್ದೇನೆ. ಆರ್ಥಿಕ ಶಕ್ತಿ ಬರಬೇಕು ಅಂತ ಭಾಷಣ ಮಾಡಿದ್ದೇನೆ. 2006-07 ಸಾರಾಯಿ ನಿಷೇಧ ಮಾಡಿದ್ದು ನಾನು, ಆವತ್ತು ನನಗೆ ಸಾವಿರಾರು ಕೋಟಿ ರೂ. ಆಫರ್ ಮಾಡಿದ್ರು. ಆದ್ರೆ ನಾನು ಮಹಿಳೆಯರಿಗಾಗಿ ಆ ಕೆಲಸ ಮಾಡಿದೆ. ಕಾಂಗ್ರೆಸ್ ಅವರಿಗೆ ನನ್ನ ಬಗ್ಗೆ ಮಾತಾಡೋಕೆ ವಿಷಯ ಇಲ್ಲ. ಅದಕ್ಕೆ ನನ್ನ ಮೇಲೆ ಮಾತಾಡ್ತಾರೆ ಅಂತಾ ತಿರುಗೇಟು ನೀಡಿದ್ದಾರೆ.

ರೇಟ್‌ ಫಿಕ್ಸ್‌ ಮಾಡಿದ್ದು ಕಾಂಗ್ರೆಸ್‌: ಕಂಗನಾ ರಣಾವತ್ ಬಗ್ಗೆ ಏನ್ ಮಾತಾಡಿದ್ರಿ? ಕಾಂಗ್ರೆಸ್‌ನವರೇ ರೇಟ್ ಫಿಕ್ಸ್ ಮಾಡಿದ್ರು. ಅಷ್ಟೇ ಅಲ್ಲ, ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಏನ್ ಹೇಳಿದ್ರು ಮರೆತಿದ್ದೀರಾ? ಮದ್ದೂರಿನಲ್ಲಿ ನನ್ನ ಮಾಜಿ ಶಾಸಕರ ಬಗ್ಗೆ ಮಾತಾಡಿದ್ರು, ಶಾಮನೂರು ಶಿವಶಂಕರಪ್ಪ, ಮಹಿಳೆಯರು ಅಡುಗೆ ಮನೆಯಲ್ಲಿ ಇರೋಕೆ ಲಾಯಕ್ಕು ಅಂತಾರೆ. ಅದಕ್ಕೆ ನೀವೆ ಕ್ಷಮೆ ಕೇಳಿದ್ರಿ, ಶಿವಕುಮಾರ್ ಉತ್ತರ ಕೊಡಪ್ಪ, ನಿಮ್ಮ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನ್ ಹೇಳ್ತಾರೆ? ಅಂತ ಕುಟುಕಿದ್ದಾರೆ.

ಈ ವಿಷಯ ಇಟ್ಟುಕೊಂಡು ಚುನಾವಣೆಗೆ ಬಂದರೆ ಜನತೆ ಮನಸು ಪರಿವರ್ತನೆ ಮಾಡೋಕೆ ಆಗೊಲ್ಲ. ಎಷ್ಟು ಕುಟುಂಬಗಳನ್ನ ನಿಮ್ಮ ಆಸ್ತಿ ದುರಾಸೆಗೆ ಏನ್ ಮಾಡಿಕೊಂಡು ಬಂದಿದ್ದೀರಾ ಗೊತ್ತಿದೆ ನನಗೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article