ತಣಿಯದ ಸಿಟ್ಟು- ಪತಂಜಲಿ ವಿರುದ್ಧ ಸುಪ್ರೀಂಕೋರ್ಟ್ ಕೆಂಡಾಮಂಡಲ

Public TV
2 Min Read

ನವದೆಹಲಿ: ಪತಂಜಲಿ (Patanjali) ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಮತ್ತು ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರ ಬೇಷರತ್ ಕ್ಷಮೆಯನ್ನು ಸುಪ್ರೀಂಕೋರ್ಟ್ (Supreme Court) ತಿರಸ್ಕರಿಸಿದೆ. ಸಂಸ್ಥೆಯ ಕ್ರಮಗಳು ‘ಉದ್ದೇಶಪೂರ್ವಕ, ಮತ್ತು ನ್ಯಾಯಲಯದ ಆದೇಶ ಧಿಕ್ಕರಿಸುವ ಪ್ರಯತ್ನ. ಹೀಗಾಗಿ ಅವರು ಸಲ್ಲಿಸಿರುವ ಅಫಿಡವಿಟ್‌ನಿಂದ ನಾವು ಸಮಾಧಾನಗೊಂಡಿಲ್ಲ ಎಂದು ಕೋರ್ಟ್ ಆಕ್ರೋಶ ಹೊರ ಹಾಕಿದೆ.

ದಾರಿ ತಪ್ಪಿಸುವ ಜಾಹೀರಾತುಗಳ (Adevertisement) ಪ್ರಸಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ನ್ಯಾ. ಹಿಮ ಕೊಹ್ಲಿ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆಯಲ್ಲಿ ಮತ್ತಷ್ಟು ಕಠಿಣವಾಗಿ ಟೀಕಿಸಿತು. ಪತಂಜಲಿ ಸಂಸ್ಥಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜನರು ಜೀವನದಲ್ಲಿ ತಪ್ಪುಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಅಂತಹ ತಪ್ಪುಗಳಿಂದ ಬೇರೆ ವ್ಯಕ್ತಿಗಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಕೀಲರಿಗೆ ಛೀಮಾರಿ ಹಾಕಿತು. ನಾವು ಕುರುಡರಲ್ಲ, ಈ ಪ್ರಕರಣದಲ್ಲಿ ನಾವು ಉದಾರವಾಗಿರಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಬಳಿಕ ವಕೀಲ ರೋಹಟಗಿ ಅವರು, ಪತಂಜಲಿ ಮತ್ತು ಅದರ ಎಂಡಿ ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಸಿದ ಎರಡು ಅಫಿಡವಿಟ್‌ಗಳನ್ನು ಮತ್ತು ಬಾಬಾ ರಾಮ್‌ದೇವ್ ಅವರ ಇನ್ನೊಂದು ಅಫಿಡವಿಟ್‌ಗಳನ್ನು ಓದಿದರು. ಈ ಅಫಿಡೆವಿಟ್ ಗೆ ಪ್ರತಿಕ್ರಿಯಿಸಿದ ಪೀಠ, ಕ್ಷಮಾಪಣೆಯು ಕಾಗದದ ಮೇಲಿದೆ, ನಿರ್ಧಾರಗಳು ಅದರ ವಿರುದ್ಧವಾಗಿದೆ. ನಾವು ಇದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇವೆ. ಈ ತಪ್ಪುಗಳು ಉದ್ದೇಶಪೂರ್ವಕ ಉಲ್ಲಂಘನೆ ಎಂದು ನಾವು ಪರಿಗಣಿಸುತ್ತೇವೆ. ಮುಂದೆ ಏನೇ ಆದರೂ ಎದುರಿಸಲು ಸಿದ್ಧರಾಗಿರಿ ಎಚ್ಚರಿಕೆ ನೀಡಿತು. ಇದನ್ನೂ ಓದಿ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಕೇಜ್ರಿವಾಲ್ ಮೇಲ್ಮನವಿ ಸಲ್ಲಿಕೆ

ವಿಚಾರಣೆ ವೇಳೆ ಪೀಠವು, ಬಾಬಾ ರಾಮ್‌ದೇವ್ ಅವರನ್ನು ತರಾಟೆಗೆ ತೆಗೆದುಕೊಂಡಿತು. ಅವರು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಕೋರಿ, ವಿದೇಶಿ ಪ್ರಯಾಣ ಉಲ್ಲೇಖಿಸಿ ಮತ್ತು ಟಿಕೆಟ್ ಸಹಿತ ಅಫಿಡವಿಟ್‌ನಲ್ಲಿ ಸಲ್ಲಿಸಿದರು. ಆದರೆ ಕೋರ್ಟ್‌ಗೆ ನೀಡುವ ಮೊದಲು ಅದನ್ನು ಮಾಧ್ಯಮಗಳಿಗೆ ಪ್ರಕಟಿಸಿದೆ. ಇದು ಪ್ರಚಾರ ಪಡೆಯುವುದಲ್ಲದೇ ಇನ್ನೇನು ಎಂದು ಪ್ರಶ್ನಿಸಿತು. ಇದನ್ನೂ ಓದಿ: ಯೋಗ ಗುರು ಬಾಬಾ ರಾಮ್‌ದೇವ್, ಪತಂಜಲಿ ಮುಖ್ಯಸ್ಥನಿಗೆ ಸುಪ್ರೀಂ ಸಮನ್ಸ್

ಪತಂಜಲಿ ಉತ್ಪನ್ನಗಳಿಗೆ ಪರವಾನಗಿ ನೀಡಿದ್ದಕ್ಕಾಗಿ ಉತ್ತರಾಖಂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪೀಠ, ಮೂವರು ಔಷಧಿ ಪರವಾನಗಿ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಅದೇಶಿಸಿತು. ಪತಂಜಲಿ ನಿಯಮ ಉಲ್ಲಂಘಿಸುವ ವೇಳೆ ನಿವೇನು ಮಾಡುತ್ತಿದ್ದೀರಿ ಕೋರ್ಟ್ ಮಧ್ಯಪ್ರವೇಶಿಸುವ ತನಕ ಕಾಯುತ್ತಿದ್ದೀರಾ ಎಂದು ಕೇಳಿತು. ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರದ ಉತ್ತರಾಖಂಡ ಜಂಟಿ ನಿರ್ದೇಶಕ ಮಿಥಿಲೇಶ್ ಕುಮಾರ್ ಮುಂದಿನ ಕ್ರಮದ ಭರವಸೆ ನೀಡಿದರು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 16 ರಂದು ನಡೆಯಲಿದ್ದು, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಕೋರ್ಟ್‌ ಮುಂದೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಹೇಳಿದೆ.

Share This Article