ಲೈಫ್ ಥ್ರೆಟ್ ಇರೋದ್ರಿಂದ ಪ್ರತೀ ದಿನ ಗನ್ ಇಟ್ಕೊಂಡೇ ಹೊರಗೆ ಬರ್ತೀನಿ: ರಿಯಾಜ್ ಅಹಮದ್

Public TV
1 Min Read

ಬೆಂಗಳೂರು: ಗನ್ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಹೂವಿನ ಹಾರ (Garlands) ಹಾಕಿರುವ ರಿಯಾಜ್ ಅಹಮದ್ ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ರಿಯಾಜ್ ತಾವು ಗನ್ ಇಟ್ಟುಕೊಂಡಿರಲು ಕಾರಣವನ್ನು ತಿಳಿಸಿದ್ದಾರೆ.

ಸಿದ್ದಾಪುರ ಪೊಲೀಸರ ವಿಚಾರಣೆ ವೇಳೆ ರಿಯಾಜ್, ನಂಗೆ ಲೈಫ್ ಥ್ರೆಟ್ ಇದೆ. ಹೀಗಾಗಿ ಪ್ರತೀ ದಿನ ಗನ್ ಇಟ್ಟುಕೊಂಡೇ ಹೊರಗೆ ಬರುತ್ತೇನೆ. ಹೊರತು ಸಿಎಂ ಮುಂದೆ ಗನ್ ಪ್ರದರ್ಶನ ಮಾಡಬೇಕು ಅನ್ನೊ ಉದ್ದೇಶ ನನಗಿರಲಿಲ್ಲ ಎಂದು ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ನಮ್ಮ ದೇವರಾಜ್ ಸಾಹೇಬ್ರು ಮೇಲೆ ಬಾ ಅಂದ್ರು. ಹೀಗಾಗಿ ವೆಹಿಕಲ್ ಮೇಲೆ ಹೋಗಿ ಸಿಎಂ ಸಾಹೇಬ್ರಿಗೆ ಹಾರ ಹಾಕಿದೆ. ಅವರು ಕರೆಯದಿದ್ದರೆ ನಾನು ಸಿಎಂ ಬಳಿ ಹೋಗ್ತಿರಲಿಲ್ಲ. ನನ್ನ ಪಾಡಿಗೆ ನಾನು ಸಿಎಂ ಪ್ರಚಾರದ ವೆಹಿಕಲ್ ಬಂದಾಗ ಸೈಡಲ್ಲಿ ನಿಂತುಕೊಂಡು ನೋಡುತ್ತಿದ್ದೆ. ವೆಹಿಕಲ್ ಮೇಲೇರಿದಾಗ ಆಕಸ್ಮಿಕವಾಗಿ ಸೊಂಟದಲ್ಲಿದ್ದ ಗನ್ ಕಂಡಿದೆ. ನಾನು ಗನ್ ಶೋ ಮಾಡಿಲ್ಲ ಎಂದು ರಿಯಾಜ್ ಪೊಲೀಸರ ಮುಂದೆ ಹೇಳಿದ್ದು, ಇದೀಗ ರಿಯಾಜ್ ಹೇಳಿಕೆಯನ್ನು ಸಿದ್ದಾಪುರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:  ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ – ಪ್ರಚಾರದ ವೇಳೆ ಭದ್ರತಾ ವೈಫಲ್ಯ?

ಏನಿದು ಪ್ರಕರಣ?: ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಭೈರಸಂದ್ರದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ರಿಯಾಜ್ ಸೊಂಟದಲ್ಲಿ ಗನ್ ಇಟ್ಟುಕೊಂಡು ಬಂದು ಹಾರ ಹಾಕಿ ಅಲ್ಲಿಂದ ತೆರಳಿದ್ದಾರೆ. ರಿಯಾಜ್ ಬಳಿ ಗನ್ ಇರುವುದನ್ನು ಪೊಲೀಸರು ಗಮನಿಸಿಲ್ಲ. ಆದರೆ ಬಳಿಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಭಾರೀ ಸುದ್ದಿಯಾಯಿತು.

ರಿಯಾಜ್ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, 5 ವರ್ಷಗಳ ಹಿಂದೆ ತನ್ನ ಮೇಲೆ ಕೊಲೆ ಯತ್ನವಾದ ಬಳಿಕ ಗನ್ ಪರವಾನಿಗೆ ಪಡೆದುಕೊಂಡಿರುವುದಾಗಿ ತಿಳಿದುಬಂದಿತ್ತು.

Share This Article