ಲಕ್ನೋ: ಸ್ಟೊಯಿನಿಸ್ ಆಕರ್ಷಕ ಅರ್ಧಶತಕ, ಯಶ್ ಠಾಕೂರ್ ಹಾಗೂ ಕೃನಾಲ್ ಪಾಂಡ್ಯ ಅಬ್ಬರದ ಬೌಲಿಂಗ್ ದಾಳಿ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ 33 ರನ್ಗಳ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಟೈಟಾನ್ಸ್ ತಂಡ 130 ರನ್ಗಳಿಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ಲಕ್ನೋ ತಂಡ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. 164 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ 18.5 ಓವರ್ಗೆ 130 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ರಾಹುಲ್ 33, ಸ್ಟೊಯಿನಿಸ್ 58, ಪೂರನ್ 32 ರನ್ ಗಳಿಸಿದರು. ಆ ಮೂಲಕ ತಂಡವು 163 ರನ್ ಗಳಿಸಿತು. ಟೈಟಾನ್ಸ್ ಪರ ಉಮೇಶ್ ಯಾದವ್, ದರ್ಶನ್ ತಲಾ 2 ವಿಕೆಟ್ ಕಿತ್ತರು.
ಇತ್ತ ಲಕ್ನೋ ನೀಡಿದ್ದ 164 ರನ್ ಗುರಿ ಬೆನ್ನತ್ತಿದ ಗುಜರಾತ್ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ 130 ರನ್ಗಳಿಗೆ ಆಲೌಟ್ ಆಯಿತು.
ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಗಿಲ್ ಮತ್ತು ಸಾಯಿ ಸುದರ್ಶನ್ ಅರ್ಧಶತಕದ ಜೊತೆಯಾಟ ನೀಡಿದರು. ಈ ನಡುವೆ 19 ರನ್ಗಳಿಗೆ ಗಿಲ್ ವಿಕೆಟ್ ಕೈ ಚೆಲ್ಲಿದರು. ಗಿಲ್ ಔಟಾದ ಬೆನ್ನಲ್ಲೇ ಟೈಟಾನ್ಸ್ ಬ್ಯಾಟರ್ಗಳು ತರಗೆಲೆಯಂತೆ ಉದುರಿ ಹೋದರು. ರಾಹುಲ್ ತೆವಾಟಿಯಾ ಏಕಾಂಗಿ (30) ಹೋರಾಟ ನಡೆಸಿದ್ದು ಬಿಟ್ಟರೆ ಯಾರೊಬ್ಬರೂ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ.
ಲಕ್ನೋ ಪರ ಯಶ್ ಠಾಕೂರ್ 5 ವಿಕೆಟ್ ಕಿತ್ತು ಮಿಂಚಿದರು. ಇವರ ಜೊತೆಗೆ ಕೃನಾಲ್ ಪಾಂಡ್ಯ 3 ವಿಕೆಟ್ ಕಬಳಿಸಿದರು. ಈ ಇಬ್ಬರು ಬೌಲರ್ಗಳ ದಾಳಿಗೆ ಸಿಲುಕಿ ಗುಜರಾತ್ ಬ್ಯಾಟರ್ಗಳು ಮಂಕಾದರು.