ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; 30 ಲಕ್ಷ ಹಣ, 2.50 ಲಕ್ಷ ಬಟ್ಟೆ ವಶ

Public TV
1 Min Read

ಕಲಬುರಗಿ: ಲೋಕಸಭಾ ಚುನಾವಣೆ (Lok Sabha Election 2024) ಹತ್ತಿರವಾಗುತ್ತಿದಂತೆ ಜಿಲ್ಲೆಯಲ್ಲಿ ಲೆಕ್ಕವಿಲ್ಲದ ಅಕ್ರಮ ಹಣದ ಪತ್ತೆ, ಸಿಗರೇಟು, ಸೀರೆ ಸಾಗಾಟ ಜೋರಾಗಿ ನಡೆಯುತ್ತಿದೆ. ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದಾಗಿ ಚಿಂಚೋಳಿ ತಾಲೂಕಿನ ಮಿರಿಯಾಣ ದಾಖಲೆ ಇಲ್ಲದ 1.35 ಲಕ್ಷದ ಮೊತ್ತದ ತಂಬಾಕು, ಸಿಗರೇಟು ಹಾಗೂ ಮೇದಕ್ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದ 30 ಲಕ್ಷ ರೂ., 2.50 ಲಕ್ಷ ರೂ. ಮೌಲ್ಯದ ಬಟ್ಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತಾಂಡೂರಿನಿಂದ ಚಿಂಚೋಳಿ ಕಡೆಗೆ ಸಾಗಿಸುತ್ತಿದ್ದ 1.35 ಲಕ್ಷ ರೂ. ಮೌಲ್ಯದ ದಾಖಲೆಯಿಲ್ಲದ ತಂಬಾಕು ಹಾಗೂ ಸಿಗರೇಟು ವಶಕ್ಕೆ ಪಡೆಯಲಾಗಿದ್ದು, ಏಳು ಲಕ್ಷ ರೂ. ಮೌಲ್ಯದ ವಾಹನ ಹಾಗೂ ಇತರೆ ಕಂಪನಿಗಳ ಸಿಗರೇಟು, ತಂಬಾಕು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ಬಿಜೆಪಿ ಕಾರ್ಯಕರ್ತನನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ ಎನ್‌ಐಎ

ಕರ್ನಾಟಕ ಹಾಗೂ ತೆಲಂಗಾಣ ‌ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯ ಮೇದಕ್ ಚೆಕ್‌ಪೋಸ್ಟ್‌ನಲ್ಲಿ ದಾಖಲೆಯಿಲ್ಲದ 30 ಲಕ್ಷ ರೂ. ಹಣ ಹಾಗೂ 2.50 ಲಕ್ಷ ರೂ. ಮೌಲ್ಯದ ಬಟ್ಟೆ ಜಪ್ತಿ ಮಾಡಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಮೇದಕ್ ಚೆಕ್‌ಪೋಸ್ಟ್ ಬಳಿ ಚುನಾವಣಾ ಸಿಬ್ಬಂದಿ ವಾಹನ ತಪಾಸಣೆ ವೇಳೆ ಕಾರಿನ ಡಿಕ್ಕಿಯಲ್ಲಿ ದೊಡ್ಡದಾದ ಬಾಕ್ಸ್‌ನಲ್ಲಿ ಹಣ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದಿರುವುದರಿಂದ 30 ಲಕ್ಷ‌ ರೂ. ಹಣದ ಜೊತೆ 2.50 ಲಕ್ಷ ರೂ. ಮೌಲ್ಯದ ಬಟ್ಟೆ ಜಪ್ತಿ ಮಾಡಲಾಗಿದೆ. ಕಾರಿನಲ್ಲಿ ನಾರಾಯಣಪೇಟೆಯಿಂದ ಕೊಡಂಗಲ್‌ಗೆ ಹಣ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಿನ ಕಂಪನಿಯೊಂದರ ಕಟ್ಟಡದಲ್ಲಿ ಅಗ್ನಿ ಅವಘಡ- ಯುವಕ ಅಸ್ವಸ್ಥ

Share This Article