ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಉಡೀಸ್‌ -‌ ಬರೋಬ್ಬರಿ 35 ಕೋಟಿ ಮಂದಿ ವೀಕ್ಷಣೆ!

Public TV
2 Min Read

ವಿಶಾಖಪಟ್ಟಣಂ: 2024ರ ಐಪಿಎಲ್‌ (IPL 2024) ಆವೃತ್ತಿ ಹಲವು ಅವಿಸ್ಮರಣೀಯ ದಾಖಲೆಗಳಿಗೆ ಸಾಕ್ಷಿಯಾಗಿದೆ. ಮೈದಾನದಲ್ಲಿ ಹುರಿಯಾಳುಗಳು ಬ್ಯಾಟ್‌ ಹಿಡಿದು ಅಬ್ಬರಿಸುತ್ತಾ ದಾಖಲೆಗಳನ್ನು ಬರೆಯುತ್ತಿದ್ದರೆ, ಗ್ರೌಂಡ್‌ ಹೊರಗೆ ಕ್ರಿಕೆಟ್‌ ಅಭಿಮಾನಿಗಳು ವೀಕ್ಷಣೆಯಲ್ಲಿ ದಾಖಲೆ ಮಾಡುತ್ತಿದ್ದಾರೆ. ಬುಧವಾರ ಕೋಲ್ಕತ್ತಾ ನೈಟ್‌ರೈಡರ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (KKR vs DC) ವಿರುದ್ಧ ಪಂದ್ಯದ ಬಳಿಕ 17ನೇ ಆವೃತ್ತಿ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದೆ.

ಲೀಗ್‌ ಸುತ್ತಿನ ಮೊದಲ 10 ಪಂದ್ಯಗಳಲ್ಲಿ ದಾಖಲೆಯ 35 ಕೋಟಿ ವೀಕ್ಷಣೆ ಕಂಡಿದೆ.‌ ಕೋವಿಡ್‌ ಬಳಿಕ ಸ್ಟಾರ್‌ ಸ್ಫೋರ್ಟ್ಸ್‌ನಲ್ಲಿ (Star Sports) ಐಪಿಎಲ್‌ ಟೂರ್ನಿಯ ಮೊದಲ 10 ಪಂದ್ಯಗಳನ್ನು 35 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನ ನುಚ್ಚುನೂರು ಮಾಡಿದೆ. ಬಾರ್ಕ್‌ (BARC) ದತ್ತಾಂಶಗಳನ್ನು ಉಲ್ಲೇಖಿಸಿ ಸ್ಟಾರ್‌ಸ್ಫೋರ್ಟ್ಸ್‌ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ರಿಷಭ್‌ ಪಂತ್‌ ಸೇರಿದಂತೆ ಇಡೀ ಡೆಲ್ಲಿ ತಂಡಕ್ಕೆ ಭಾರೀ ದಂಡ

ಅಲ್ಲದೇ ಟಿವಿಯಲ್ಲಿ ಪಂದ್ಯಾವಳಿಯ ಒಟ್ಟು ವೀಕ್ಷಣೆ ಸಮಯವು 8,028 ಕೋಟಿ ನಿಮಿಷಗಳಷ್ಟು ತಲುಪಿದೆ. ಇದು ಕಳೆದ ವರ್ಷಕ್ಕಿಂತ 20% ಹೆಚ್ಚಳವಾಗಿದೆ. ಅಲ್ಲದೇ ಹಿಂದಿನ ಎಲ್ಲಾ ಆವೃತ್ತಿಗಳಿಗೆ ಹೋಲಿಸಿದರೆ, 17ನೇ ಆವೃತ್ತಿಯ ಐಪಿಎಲ್‌ ಪಂದ್ಯದ ರೇಟಿಂಗ್‌ಗಳು 22% ರಷ್ಟು ಏರಿಕೆಯಾಗಿದೆ ಎಂದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನ ಕ್ರೀಡಾ ವಿಭಾಗದ ಮುಖ್ಯಸ್ಥ ಸಂಜೋಗ್ ಗುಪ್ತಾ ತಿಳಿಸಿದ್ದಾರೆ.

17ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಕಳೆದ ಮಾರ್ಚ್‌ 22ರಂದು ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು. ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಆರ್‌ಸಿಬಿ ನಡುವಿನ ಉದ್ಘಾಟನಾ ಪಂದ್ಯವನ್ನು ಸುಮಾರು 16.8 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು. ಮೊದಲ 6 ಪಂದ್ಯಗಳನ್ನು ಜಿಯೋ ಸಿನಿಮಾದಲ್ಲಿ ಆಪ್‌ನಲ್ಲಿ 20 ಕೋಟಿ ಮಂದಿ ವೀಕ್ಷಿಸಿದ್ದರು. ಇದನ್ನೂ ಓದಿ: ಕೆಕೆಆರ್‌ ರನ್‌ ಹೊಳೆಯಲ್ಲಿ ಮುಳುಗಿದ ಡೆಲ್ಲಿ – ನೈಟ್‌ರೈಡರ್ಸ್‌ಗೆ 106 ರನ್‌ಗಳ ಭರ್ಜರಿ ಜಯ

ಡಿಸ್ನಿ ಸ್ಟಾರ್‌ ಟಾಟಾ ಐಪಿಎಲ್‌ ಟೂರ್ನಿಯನ್ನು 10 ಭಾಷೆಗಳಲ್ಲಿ ಮತ್ತು 14 ವಾಹಿನಿಗಳಲ್ಲಿ ಪ್ರಸಾರ ಮಾಡುತ್ತಿದೆ. ಅಲ್ಲದೇ ಶ್ರವಣದೋಷವುಳ್ಳವರಿಗಾಗಿ ಸಂಕೇತ ಭಾಷೆಯಲ್ಲಿಯೂ ಕಾಮೆಂಟ್ರಿ ಪ್ರಸಾರ ಮಾಡಲಾಗುತ್ತಿದೆ. ಈ ನಡುವೆ ಜಿಯೋ ಸಿನಿಮಾ ತನ್ನ ಆಪ್‌ ಮತ್ತು ಕಂಪ್ಯೂಟರ್‌ ವೀಕ್ಷಕರಿಗೆ ಜೀತೋ ಧನ್ ಧನಾ ಧನ್ ಸ್ಪರ್ಧೆಯ ಮೂಲಕ ಪ್ರತೀ ಪಂದ್ಯದ ವೀಕ್ಷಣೆಯ ವೇಳೆ ಕಾರು ಗೆಲ್ಲುವ ಜೊತೆ ಅತ್ಯಾಕರ್ಷಕ ಬಹುಮಾನಗಳನ್ನೂ ವಿತರಿಸಲಾಗುತ್ತಿದೆ. ಕಳೆದ ವರ್ಷವೂ ಟಾಟಾ ಐಪಿಎಲ್‌ನ ಮೊದಲ 5 ವಾರಗಳಲ್ಲಿ 1,300 ಕೋಟಿಗೂ ಅಧಿಕ ವಿಡಿಯೋ ವೀಕ್ಷಣೆಯ ದಾಖಲೆಯನ್ನು ಜಿಯೋ ಸಿನಿಮಾ ತನ್ನದಾಗಿಸಿಕೊಂಡಿತ್ತು. ಇದನ್ನೂ ಓದಿ: 2ನೇ ಬಾರಿಗೆ ಆರ್‌ಸಿಬಿ ದಾಖಲೆ ನುಚ್ಚುನೂರು – ಐಪಿಎಲ್‌ ಇತಿಹಾಸದಲ್ಲಿ ಮತ್ತೊಂದು ವಿಶೇಷ ಸಾಧನೆ

Share This Article