ಪೆರ್ರಿ ಆಲ್‌ರೌಂಡರ್‌ ಆಟ – ಮುಂಬೈ ವಿರುದ್ಧ ಜಯ, ಪ್ಲೇ ಆಫ್‌ಗೆ ಆರ್‌ಸಿಬಿ

Public TV
2 Min Read

– 6 ವಿಕೆಟ್‌ ಕಿತ್ತು ದಾಖಲೆ ಬರೆದ ಪೆರ್ರಿ
– 8 ಬೌಲರ್‌ಗಳನ್ನು ಕಣಕ್ಕೆ ಇಳಿಸಿದ ಆರ್‌ಸಿಬಿ

ನವದೆಹಲಿ: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಎಲ್ಲಿಸ್ ಪೆರ್ರಿ (Ellyse Perry) ಅವರ ಭರ್ಜರಿ ಆಟದ ನೆರವಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ನಲ್ಲಿ (WPL) ಆರ್‌ಸಿಬಿ(RCB) ತಂಡ ಮುಂಬೈ ಇಂಡಿಯನ್ಸ್‌(MI) ವಿರುದ್ಧ 7 ವಿಕೆಟ್‌ ಜಯ ಸಾಧಿಸಿ ಪ್ಲೇಆಫ್‌ಗೆ (Playoff ) ಅರ್ಹತೆ ಪಡೆದಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ 19 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಸವಾಲನ್ನು ಬೆನ್ನೆಟ್ಟಿದ ಆರ್‌ಸಿಬಿ 15 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 115 ರನ್‌ ಹೊಡೆಯುವ ಮೂಲಕ ಜಯ ಸಾಧಿಸಿತು. ಡಬ್ಲ್ಯೂಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಲ್ಲಿಯವರೆಗೆ  ಮುಂಬೈ ವಿರುದ್ಧ ಸತತವಾಗಿ ಸೋತಿದ್ದ ಆರ್‌ಸಿಬಿ ಈ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಸಂಭ್ರಮಿಸಿತು.

39 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಎಲ್ಲಿಸ್‌ ಪೆರ್ರಿ ಮತ್ತು ರಿಚಾ ಘೋಷ್‌ (Richa Ghosh) ಮುರಿಯದ ನಾಲ್ಕನೇ ವಿಕೆಟಿಗೆ 53 ಎಸೆತಗಳಲ್ಲಿ 76 ರನ್‌ ಜೊತೆಯಾಟವಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಎಲ್ಲಿಸ್‌ ಪೆರ್ರಿ ಔಟಾಗದೇ 40 ರನ್‌ (38 ಎಸೆತ, 5 ಬೌಂಡರಿ, 1 ಸಿಕ್ಸರ್‌), ರಿಚಾ ಘೋಷ್‌ ಔಟಾಗದೇ 36 ರನ್‌ (28 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹೊಡೆದರು.

ಮೊದಲು ಬ್ಯಾಟ್‌ ಮುಂಬೈ 1 ವಿಕೆಟ್‌ ನಷ್ಟಕ್ಕೆ 65 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿ ಇತ್ತು. ಆದರೆ ಸಜಿವನ್‌ ಸಂಜನಾ ಔಟಾದ ಬೆನ್ನಲ್ಲೆ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ (Harmanpreet Kaur)  ಶೂನ್ಯಕ್ಕೆ ಬೌಲ್ಡ್‌ ಆದರು. ಮಧ್ಯಮ ಕ್ರಮಾಂಕದಲ್ಲಿ ಯಾರಿಂದಲೂ ಉತ್ತಮ ಹೋರಾಟ ಬರಲಿಲ್ಲ. ಕೊನೆಯಲ್ಲಿ ಪ್ರಿಯಾಂಕಾ ಬಲ 19 ರನ್‌ ಹೊಡೆಯುವ ಮೂಲಕ ತಂಡದ ಮೊತ್ತ 100 ರನ್‌ಗಳ ಗಡಿದಾಟಿತು.

ಬೌಲಿಂಗ್‌ನಲ್ಲಿ ದಾಖಲೆ:
ಈ ಪಂದ್ಯದಲ್ಲಿ 6 ವಿಕೆಟ್‌ ಪಡೆಯುವ ಮೂಲಕ ಡಬ್ಲ್ಯೂಪಿಎಲ್‌ ಟೂರ್ನಿಯಲ್ಲಿ 6 ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ಹೆಗ್ಗಳಿಕೆಗೆ ಪೆರ್ರಿ ಪಾತ್ರವಾಗಿದ್ದಾರೆ. ಐದನೆಯವರಾಗಿ ಬೌಲಿಂಗ್‌ಗೆ ಇಳಿದ ಪೆರ್ರಿ ಕೇವಲ 15 ರನ್‌ ನೀಡಿ ಮುಂಬೈ ತಂಡವನ್ನು ಕಟ್ಟಿಹಾಕಿದರು.

8 ಬೌಲರ್‌ ಪ್ರಯೋಗ:
ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್‌ಸಿಬಿಯ 8 ಮಂದಿ ಬೌಲಿಂಗ್‌ ಮಾಡಿದ್ದು ವಿಶೇಷವಾಗಿತ್ತು. ಅನುಭವಿ ಸ್ಪಿನ್ನರ್‌ ಶ್ರೇಯಾಂಕ ಪಾಟೀಲ್‌ 8ನೇಯವರಾಗಿ ಬೌಲ್‌ ಮಾಡಿದ್ದರು.

ಆರ್‌ಸಿಬಿ ಎದುರಾಳಿ ಯಾರು?
ಅಂಕಪಟ್ಟಿಯಲ್ಲಿ ಡೆಲ್ಲಿ ಮತ್ತು ಮುಂಬೈ ತಲಾ 10 ಅಂಕ ಪಡೆದಿದೆ. ಬುಧವಾರ ಡೆಲ್ಲಿ ಮತ್ತು ಗುಜರಾತ್‌ ಮಧ್ಯೆ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಡೆಲ್ಲಿ ಜಯಗಳಿಸಿದರೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ.

ಒಂದು ವೇಳೆ ಗುಜರಾತ್‌ ಭಾರೀ ಅಂತರದಿಂದ ಗೆದ್ದರೆ ಮುಂಬೈ ಇಂಡಿಯನ್ಸ್‌ ರನ್‌ ರೇಟ್‌ ಉತ್ತಮವಾಗಿದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಮುಂಬೈ ಫೈನಲ್‌ ಪ್ರವೇಶಿಸಲಿದೆ.

ಆರ್‌ಸಿಬಿ ಈಗ 8 ಪಂದ್ಯಗಳಿಂದ 8 ಅಂಕ ಗಳಿಸಿದ್ದು ಎರಡನೇ ಸ್ಥಾನ ಪಡೆದ ತಂಡದೊಂದಿಗೆ ಎಲಿಮಿನೇಟರ್‌ ಪಂದ್ಯವಾಡಲಿದೆ. ಒಂದು ವೇಳೆ ಡೆಲ್ಲಿ ವಿರುದ್ಧ ಪಂದ್ಯವನ್ನು ಗೆದ್ದು ಉತ್ತಮ ರನ್‌ ರೇಟ್‌ ಹೊಂದಿದ್ದರೆ ಆರ್‌ಸಿಬಿಗೆ ನೇರವಾಗಿ ಫೈನಲ್‌ ಪ್ರವೇಶಿಸುವ ಸಾಧ್ಯತೆ ಇತ್ತು. ಶುಕ್ರವಾರ ಎಲಿಮಿನೇಟರ್‌ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಆರ್‌ಸಿಬಿ ಜಯಗಳಿಸಿದರೆ ಮಾತ್ರ ಫೈನಲ್‌ ಪ್ರವೇಶಿಸಲಿದೆ. ಭಾನುವಾರ ಫೈನಲ್‌ ಪಂದ್ಯ ನಡೆಯಲಿದೆ

Share This Article