ಬಸ್‌ ನಿಲ್ದಾಣದಲ್ಲೇ ಟೈಮರ್‌ ಫಿಕ್ಸ್‌ – ಕೊನೆಯ 10 ನಿಮಿಷದ ಕಂಪ್ಲೀಟ್‌ ವರದಿ ಓದಿ

By
2 Min Read

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್‌ ಇಟ್ಟ ಬಾಂಬರ್‌ ಬಸ್‌ ನಿಲ್ದಾಣದಲ್ಲೇ ಟೈಮರ್‌ ಫಿಕ್ಸ್‌ ಮಾಡಿದ ವಿಡಿಯೋ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ.

ಹೌದು. ಐಟಿಪಿಎಲ್‌ನಿಂದ ಬಸ್‌ನಲ್ಲಿ ಆಗಮಿಸಿದ ಈತ ಬೆಳಗ್ಗೆ 10:45ಕ್ಕೆ ಕುಂದಲಹಳ್ಳಿ ಬಸ್‌ ನಿಲ್ದಾಣದಲ್ಲಿ (Bus Stand) ಇಳಿಯುತ್ತಾನೆ. ಅಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾಲ ಕಳೆದು ನಡೆದುಕೊಂಡು ಬರುತ್ತಾನೆ.

ಮಾಸ್ಕ್‌ ಮತ್ತು ಹ್ಯಾಟ್‌ ಧರಿಸಿದ್ದ ಆರೋಪಿ ನಡೆದುಕೊಂಡು ಬರುವಾಗ ಎಲ್ಲಿಯೂ ಪಾದಚಾರಿ ಮಾರ್ಗದಲ್ಲಿ ಆಗಮಿಸದೇ ರಸ್ತೆಯಲ್ಲೇ ಹೆಜ್ಜೆ ಹಾಕಿದ್ದ. ಪಾದಚಾರಿ ಮಾರ್ಗದಲ್ಲಿ ನಡೆದರೆ ತನ್ನ ಚಹರೆ ಸುಲಭವಾಗಿ ಸಿಗಬಹುದು ಎಂಬ ಕಾರಣಕ್ಕೆ ರಸ್ತೆಯಲ್ಲೇ ನಡೆದುಕೊಂಡು ಕೆಫೆಯತ್ತ ಹೆಜ್ಜೆ ಹಾಕಿದ್ದಾನೆ.  ಇದನ್ನೂ ಓದಿ: ಕಡಬ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ – ಪ್ರೇಮ ನಿವೇದನೆ ಒಪ್ಪದ್ದಕ್ಕೆ ಕೃತ್ಯ

ಬೆಳಗ್ಗೆ 11:34ಕ್ಕೆ ರಾಮೇಶ್ವರಂ ಕೆಫೆಯನ್ನು ಪ್ರವೇಶಿಸಿದ್ದ ನೇರವಾಗಿ ಕೌಂಟರ್‌ಗೆ ತೆರಳಿ ರವೆ ಇಡ್ಲಿಯನ್ನು ಖರೀದಿಸುತ್ತಾನೆ. ಕೇವಲ 9 ನಿಮಿಷದಲ್ಲಿ ರವೆ ಇಡ್ಲಿ ತಿಂದ ಬಾಂಬರ್‌ ಬಂಬ್‌ ಇಟ್ಟು 11:43ಕ್ಕೆ ಕೆಫೆಯಿಂದ ತೆರಳುತ್ತಾನೆ.

ಕೆಫೆಗೆ ಬಾಂಬ್ ಇಟ್ಟ ಬಳಿಕ ಆರೋಪಿ ಕುಂದಲಹಳ್ಳಿಯಲ್ಲಿ ಬಸ್‌ ಹತ್ತಿ ಕಾಡುಗೋಡಿಯಲ್ಲಿ ಇಳಿದಿದ್ದಾನೆ. ಬಳಿಕ ಆತ ಎಲ್ಲಿಗೆ ಹೋದ ಎಂಬ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿಲ್ಲ. ಹೀಗಾಗಿ ಕುಂದಲಹಳ್ಳಿ, ಕೆ.ಆರ್‌.ಪುರ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ, ಮಾರತ್ತಹಳ್ಳಿ, ಹೆಬ್ಬಾಳ ಹಾಗೂ ಎಚ್‌ಎಎಲ್‌ ಸೇರಿ ರಾಮೇಶ್ವರಂ ಕೆಫೆಗೆ ವ್ಯಾಪ್ತಿಯ 4-5 ಕಿ.ಮೀ. ಸುತ್ತಲಿನ ಮಾರ್ಗದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ.

ಡಮ್ಮಿ ಮೊಬೈಲ್‌ ಬಳಕೆ:
ಬಾಂಬರ್‌ ರಸ್ತೆಯಲ್ಲಿ ಬರುವಾಗ ಹೋಟೆಲ್‌ ಪ್ರವೇಶದ ವೇಳೆ, ಹೋಟೆಲ್‌ ಒಳಗಡೆ, ನಂತರ ಹೋಟೆಲಿನಿಂದ ತೆರಳುವಾಗ ಮೊಬೈಲಿನಲ್ಲಿ ಮಾತನಾಡಿಕೊಂಡು ಬಂದಿದ್ದಾನೆ. ಈತ ಮಾತನಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದಂತೆ ಪೊಲೀಸರು ಟವರ್‌ ಡಂಪ್‌ ಮಾಡಿ ಆ ಸಮಯದಲ್ಲಿ ಆ ಜಾಗದಲ್ಲಿ ಸಕ್ರಿಯವಾಗಿದ್ದ ಮೊಬೈಲ್‌ಗಳನ್ನು ಪರೀಕ್ಷೆ ಮಾಡಿದ್ದಾರೆ. ಕೆಫೆಯ ಬಳಿ ಆ ಸಮಯದಲ್ಲಿ ಸಕ್ರಿಯವಾಗಿದ್ದ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದ್ದಾರೆ. ಎಲ್ಲಾ ತನಿಖೆಯ ನಂತರ ಆತ ಡಮ್ಮಿ ಮೊಬೈಲ್‌ ಫೋನ್‌ ಬಳಸಿದ್ದ ವಿಚಾರ ಗೊತ್ತಾಗಿದೆ.

ಪೊಲೀಸರ ತನಿಖೆಯ ದಾರಿ ತಪ್ಪಿಸಲೆಂದೇ ಮೊಬೈಲ್‌ ಫೋನಿನಲ್ಲಿ ಮಾತನಾಡಿದಂತೆ ಪೋಸ್‌ ನೀಡುತ್ತಾ ಬಂದಿದ್ದ. ಕೆಫೆಯಿಂದ ತೆರಳುವಾಗಲೂ ಫೋನಿನಲ್ಲಿ ಮಾತನಾಡುತ್ತಾ ತೆರಳಿದ್ದ.

ಪಾದಚಾರಿ ಮಾರ್ಗ ಬಿಟ್ಟು ರಸ್ತೆಯಲ್ಲಿ ನಡೆದಿರುವುದು, ಡಮ್ಮಿ ಫೋನ್‌ ಬಳಸಿರುವುದು, ತಲೆಯನ್ನು ಕೆಳಗಡೆ ಹಾಕಿ ಹೆಜ್ಜೆ ಹಾಕಿರುವುದು, ಪರಿಚಯ ಸಿಗದೇ ಇರಲು ಮಾಸ್ಕ್‌ ಮತ್ತು ಹ್ಯಾಟ್‌ ಧರಿಸಿರುವುದನ್ನು ನೋಡಿದಾಗ ಆರೋಪಿ ಮೊದಲೇ ಬಹಳ ಸಿದ್ಧತೆ ನಡೆಸಿ ಕೃತ್ಯ ಎಸಗಿರುವುದು ಸ್ಪಷ್ಟವಾಗುತ್ತಿದೆ.

 

Share This Article