ಆರೋಗ್ಯ ಸುಧಾರಣೆ – ಮಾವಿನಕೆರೆ ರಂಗನಾಥಸ್ವಾಮಿಗೆ ಹರಕೆ ತೀರಿಸಿದ ದೊಡ್ಡಗೌಡ್ರು

Public TV
2 Min Read

– ನಾನು, ರೇವಣ್ಣ ಪೂಜೆ ಮಾಡಿದ್ರೆ ಅಪಾರ್ಥ ಕಲ್ಪಿಸ್ತಾರೆ, ಇದಕ್ಕೆ ರಾಜಕೀಯ ಬೆರೆಸಬೇಡಿ

ಹಾಸನ: ಮಾಜಿ ಪ್ರಧಾನಿ ದೇವೇಗೌಡರು (H.D Deve Gowda) ಮಾವಿನಕೆರೆ ರಂಗನಾಥಸ್ವಾಮಿ ಸಮ್ಮುಖದಲ್ಲಿ 1001 ಕಳಸ ಪೂಜೆ ನೆರವೇರಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆರೋಗ್ಯ ಸಮಸ್ಯೆ ಪರಿಹಾರವಾದರೆ ಪೂಜಾ ಕೈಂಕರ್ಯ ಮಾಡುವುದಾಗಿ ಮಾವಿನಕೆರೆ ರಂಗನಾಥಸ್ವಾಮಿಗೆ ಹರಕೆ ಕಟ್ಟಿಕೊಂಡಿದ್ದೆ. ಅದನ್ನಿಂದು ತೀರಿಸಿದ್ದೇನೆ. ಇದರಲ್ಲಿ ರಾಜಕೀಯ ಬೆರೆಸಬೇಡಿ ಎಂದು ಅವರು ಹೇಳಿದ್ದಾರೆ.

ನಾವು ದೇವರನ್ನು ನಂಬಿದ್ದೇವೆ. ನಮ್ಮ ತಂದೆ ಇಲ್ಲಿನ ಹಳೆಯ ದಾರಿಯಲ್ಲಿ ನನ್ನನ್ನು ಕರೆದುಕೊಂಡು ಬರುತ್ತಿದ್ದರು. ಈ ಪೂಜಾ ಕಾರ್ಯಕ್ರಮದ ವ್ಯವಸ್ಥೆಯನ್ನು ನಾನು, ರೇವಣ್ಣ (H.D Revanna) ಮಾಡಿದ್ರೆ ಅಪಾರ್ಥ ಕಲ್ಪಿಸುತ್ತಾರೆ. ಅದಕ್ಕೇ ನನ್ನ ಮಿತ್ರರಿಗೆ ಹೇಳಿದ್ದೆ. ಅವರೇ ಖುದ್ದು ನಿಂತು ಎಲ್ಲಾ ಮಾಡಿದ್ದಾರೆ ಎಂದಿದ್ದಾರೆ.

ನನ್ನ ಆರೋಗ್ಯ ಸರಿ ಇರಲಿಲ್ಲ. ಎರಡು ವರ್ಷ ಭಗವಂತನ ಅನುಗ್ರಹದಿಂದ ಬದುಕಿದ್ದೇನೆ. ನನ್ನ ಅಳಿಯ ಡಾ.ಮಂಜುನಾಥ್ ಹಾಗೂ ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥರಾದ ಡಾ.ಸುದರ್ಶನ್ ಬಲ್ಲಾಳ್ ಮತ್ತು ಅವರ ತಂಡ ಎರಡು ವರ್ಷದಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಶುಕ್ರವಾರ ಸಂಜೆ 6 ಗಂಟೆಯಿಂದ ರಂಗನಾಥಸ್ವಾಮಿ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ, ನಮ್ಮ ಸಂಪ್ರದಾಯದಂತೆ ಪೂಜಾ ಕಾರ್ಯ ಮಾಡುತ್ತಿದ್ದೇವೆ. ತುಂಬಾ ಜನ ಪುರೋಹಿತರಿದ್ದಾರೆ, ಹೊರಗಡೆಯಿಂದಲೂ ಬಂದಿದ್ದಾರೆ. ಭಾನುವಾರ 4 ಗಂಟೆಗೆ ಪೂಜೆ ಮುಗಿಯಬಹುದು. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಅವರು ಹೇಳಿದ್ದಾರೆ.

ರಂಗನಾಥನ ಆಶೀರ್ವಾದದಿಂದ ರಾಜಕೀಯದಲ್ಲಿ ನಾನು ಬೆಳೆದಿದ್ದೇನೆ. ನನಗೆ ಎಂಟು ವರ್ಷವಿದ್ದಾಗ ( 80 ವರ್ಷಗಳ ಹಿಂದೆ) ಈ ಕಾರ್ಯಕ್ರಮ ನಡೆದಿತ್ತು. ನಾಳೆ (ಭಾನುವಾರ) ಬಹಳ ಭಕ್ತಾಧಿಗಳು ಬರ್ತಾರೆ. ಅಂತಿಮವಾಗಿ ಕಳಸ ಪ್ರತಿಷ್ಠಾಪನೆ ಮಾಡ್ತಾರೆ. ಈ ಅವಕಾಶ ಮಾಡಿಕೊಟ್ಟ ದೇವರಿಗೆ ನಾನು ತುಂಬಾ ಅಬಾರಿಯಾಗಿದ್ದೇನೆ ಎಂದಿದ್ದಾರೆ.

ನನಗೆ ಕಿಡ್ನಿ ಫೇಲಾಗಿ ತೊಂದರೆ ಆಯ್ತು, ಈಗ ಎಲ್ಲಾ ಸರಿ ಹೋಗಿದೆ. ನಾನು ಆರೋಗ್ಯವಾಗಿರಲು ಡಾಕ್ಟರ್‌ಗಳ ಪ್ರಾಮಾಣಿಕ ಪ್ರಯತ್ನ ಕಾರಣ. ಭಗವಂತನ ಅನುಗ್ರಹ, ನನ್ನ ಅಳಿಯ, ಸುದರ್ಶನ್ ಬಲ್ಲಾಳ್ ಮತ್ತು ಅವರ ತಂಡದ ಪ್ರಯತ್ನದ ಫಲವಾಗಿ ಸುಧಾರಿಸಿದ್ದೇನೆ. ವಯಸ್ಸಿನ ಕಾರಣದಿಂದ ನನಗೆ ಮಂಡಿ ನೋವಿದೆ, ಆದರೆ ಜ್ಞಾಪಕ ಶಕ್ತಿ ಚೆನ್ನಾಗಿದೆ. ಹಿಂದೆ ಕಾಂಗ್ರೆಸ್‍ನಿಂದ ಟಿಕೆಟ್ ತಪ್ಪಿತು, ಹತ್ತು ರೂ ಬಾಡಿಗೆ ಮನೆಯಲ್ಲಿದ್ದೆ. ಆಗ ನನ್ನ ಪತ್ನಿ ಹೇಳಿದ್ದರು, ಆ ರಂಗನಾಥ ಇದ್ದಾನೆ ಚುನಾವಣೆಗೆ ನಿಂತುಕೊಳ್ಳಿ ಎಂದು, ಜನರೇ ದುಡ್ಡು ಹಾಕಿ ಚುನಾವಣೆ ಮಾಡಿದ್ದರು. ಆಗ ಗೆದ್ದೆ ಎಂದು ನೆನಪು ಮಾಡಿಕೊಂಡಿದ್ದಾರೆ.

ಬಳಿಕ ಅಲ್ಲಿಂದ ಪ್ರಧಾನಮಂತ್ರಿ ಆದೆ. ನಾನು ರಾಜಕಾರಣ ಆರಂಭಿಸುವಾಗಲೂ ರಂಗನಾಥನ ಆಶೀರ್ವಾದ ಪಡೆದಿದ್ದೇನೆ. ನನಗೆ ಮೂರು ವರ್ಷ ಇದ್ದಾಗಿನಿಂದಲೂ ಈ ದೇವರ ಆಶೀರ್ವಾದ ಪಡೆದಿದ್ದೇನೆ. ಆ ಭಗವಂತನ ಅನುಗ್ರಹದಿಂದ ಬದುಕಿದ್ದೇನೆ ಎಂದಿದ್ದಾರೆ.

ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ವಿವರ ಗೊತ್ತಿಲ್ಲ. ನನ್ನ ಮಗ ಹರದನಹಳ್ಳಿಯಲ್ಲಿ ಟಿವಿ ಹಾಕ್ಸಿಲ್ಲ, ಪೇಪರ್ ಕೂಡ ನೋಡಿಲ್ಲ. ನಾನು, ನನ್ನ ಮನಸ್ಸು ರಂಗನಾಥಸ್ವಾಮಿ ಅಷ್ಟೇ. ಹಾಗಂದ ಮಾತ್ರಕ್ಕೆ ರಾಜಕೀಯದಿಂದ ದೂರ ಹೋಗಲ್ಲ ಎಂದಿದ್ದಾರೆ.

Share This Article