ಬರಿದಾದ ತುಂಗಭದ್ರೆಯ ಒಡಲು; ಪುಣ್ಯಸ್ನಾನಕ್ಕೆ ಹುಲಿಗೆಮ್ಮ ಭಕ್ತರ ಅಲೆದಾಟ!

Public TV
2 Min Read

– ಪ್ರತಿ ಹುಣ್ಣಿಮೆಗೆ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತ‌ ಸಮೂಹ

ಕೊಪ್ಪಳ: ತುಂಗಭದ್ರಾ ನದಿಯ (Tungabhadra River) ಒಡಲು ಬರಿದಾಗಿದ್ದು, ಹುಲಿಗೆಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರು ಪುಣ್ಯಸ್ನಾನಕ್ಕೆ (Holy Bath) ಪರದಾಡುವಂತಾಗಿದೆ. ಬೇಸಿಗೆ ಆರಂಭದಲ್ಲೇ ಇಂತಹ ಸ್ಥಿತಿ ಎದುರಾಗಿದ್ದು, ಮುಂದಿನ ಮೂರ್ನಾಲ್ಕು ತಿಂಗಳು ಹೇಗೆ ಎಂಬ ಆತಂಕ ಎದುರಾಗಿದೆ.

ರಾಜ್ಯದ ಶಕ್ತಿ ದೇವತಾ ಕ್ಷೇತ್ರದಲ್ಲಿ ಒಂದಾದ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಬಂದು ಹೋಗುತ್ತಾರೆ.‌ ಅದರಲ್ಲೂ ಹುಣ್ಣಿಮೆಯ ದಿನ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಇಲ್ಲಿಗೆ ಬರುವ ಬಹುತೇಕ ಭಕ್ತರು ದೇವಸ್ಥಾನ ಪಕ್ಕದಲ್ಲೇ ಹರಿಯುವ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಹರಕೆ ಕಟ್ಟಿಕೊಳ್ಳುತ್ತಾರೆ. ಆದ್ರೆ ಈ ವರ್ಷ ವರುಣನ ಮುನಿಸು ಭಕ್ತರ ಮೇಲೂ ಪರಿಣಾಮ ಬೀರಿದೆ. ನದಿಯಲ್ಲಿ ನೀರಿನ ಕೊರತೆಯಿಂದಾಗಿ ಸ್ನಾನ ಮಾಡದೇ ಹಿಂದಿರುಗುತ್ತಿದ್ದಾರೆ. ಇನ್ನೂ ಕೆಲವರು ಅನಿವಾರ್ಯವಾಗಿ ತಗ್ಗು ಪ್ರದೇಶಗಳಲ್ಲಿ ಕಟ್ಟಿಕೊಂಡ ನೀರಿನಲ್ಲೇ ಸ್ನಾನ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಭರತ ಹುಣ್ಣಿಮೆ:
ಪ್ರತಿ ಹುಣ್ಣಿಮೆ ಸಂದರ್ಭದಲ್ಲಿ ಹುಲಿಗೆಮ್ಮ ದೇವಸ್ಥಾನ ಭಕ್ತರಿಂದ ತುಂಬಿರುತ್ತದೆ. ಆದರೆ, ಭರತ ಹುಣ್ಣಿಮೆಗೆ ಈ ಸಂಖ್ಯೆ ದುಪ್ಪಟ್ಟಾಗುತ್ತದೆ. ಅದರಂತೆ ಶನಿವಾರವಾದ ಇಂದೂ ಸಹ ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಬರುವ ಭಕ್ತರು, ತುಂಗಭದ್ರ ನದಿಯಲ್ಲಿ ಸ್ನಾನ ಮಾಡಿ, ದೇವಿ ದರ್ಶನ ಪಡೆದರೆ ಸಂಕಷ್ಟ ನಿವಾರಣೆ ಆಗುತ್ತವೆ ಎಂಬ ನಂಬಿಕೆಯಿಂದ ಬರುತ್ತಾರೆ. ಆದರೆ, ಈ ಬಾರಿ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದ ಭಕ್ತರಿಗೆ ತುಂಗಭದ್ರೆಯ ಪವಿತ್ರ ಸ್ನಾನ ಮಾಡುವ ಅವಕಾಶ ಸಿಗದೇ ನಿರಾಸೆಯಿಂದ ಹಿಂದಿರುಗಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೊಂದು ಮುಸ್ಲಿಮರಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ: ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌

ಪಕ್ಕದಲ್ಲೇ ಡ್ಯಾಂ:
ಭಕ್ತರು ಸ್ನಾನ ಮಾಡುವ ಜಾಗದಿಂದ ನೋಡಿದರೂ ತುಂಗಭದ್ರ ಜಲಾಯಶ ಗೋಚರಿಸುತ್ತದೆ. ಆದರೆ,‌ ಈ ಬಾರಿ ಮಳೆ ಕೊರತೆಯಿಂದಾಗಿ ಜಲಾಶಯದಲ್ಲೂ ನೀರಿನ ಕೊರತೆಯಾಗಿದೆ. ಸದ್ಯ ಡ್ಯಾಂನಲ್ಲಿ ಕೇವಲ 9 ಟಿಎಂಸಿಯಷ್ಟು ನೀರಿದ್ದು, ಕುಡಿಯುವ ನೀರಿನ ಯೋಜನೆಗೆ ಕಾಲುವೆ ಮೂಲಕ ನೀರು ಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ನದಿಗೆ ಬಿಡುಗಡೆ ಮಾಡುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಇದನ್ನೂ ಓದಿ: ಕೋಟಿ ಕೋಟಿ ಒಡೆಯ ಅಯೋಧ್ಯೆ ಬಾಲರಾಮ – ಒಂದು ತಿಂಗಳಲ್ಲಿ 25 ಕೋಟಿ ಸಂಗ್ರಹ

Share This Article