WPL 2024: ಮುಂಬೈ ಇಂಡಿಯನ್ಸ್‌ ಗೆಲುವಿನ ಶುಭಾರಂಭ – ಉದ್ಘಾಟನಾ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೋಲು

By
3 Min Read

ಬೆಂಗಳೂರು: ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯ (Yastika Bhatia )ಸ್ಫೋಟಕ ಅರ್ಧಶತಕಗಳ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians) ಮಹಿಳಾ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 4 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮಹಿಳಾ ಪ್ರೀಮಿಯರ್‌ಲೀಗ್‌ (WPL 2024) 2ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೇ ಮುಂಬೈ ಶುಭಾರಂಭ ಕಂಡಿದೆ. ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧ ಶತಕ – ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ರೂಟ್‌!

ಇನ್ನೂ 2023ರ ಮಹಿಳಾ ಪ್ರೀಮಿಯರ್‌ ಲೀಗ್‌ ಆವೃತ್ತಿಯ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲೂ ಮುಂಬೈ ವಿರುದ್ಧವೇ ಸೋಲನುಭವಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಮಹಿಳಾ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171 ರನ್‌ ಬಾರಿಸಿತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 173 ರನ್‌ ಸಿಡಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: ನಲುಗಿದ ಆಂಗ್ಲ ಪಡೆಗೆ ರೂಟ್‌ ಶತಕದ ಬಲ – ಮೊದಲ ದಿನವೇ 300ರ ಗಡಿ ದಾಟಿದ ಇಂಗ್ಲೆಂಡ್‌

ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಮುಂಬೈ ತಂಡಕ್ಕೆ ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲೇ ಮುಂಬೈ ತಂಡ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ನಂತರ ಮುಂದಿನ 2 ಎಸೆತಗಳಲ್ಲಿ ಕೇವಲ 3 ರನ್‌ ತಂಡಕ್ಕೆ ಸೇರಿತು. 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಹರ್ಮನ್‌ಪ್ರೀತ್‌ 5ನೇ ಎಸೆತವನ್ನು ಸಿಕ್ಸರ್‌ ಸಿಡಲು ಹೋಗಿ ಕ್ಯಾಚ್‌ ನೀಡಿದರು. ಕೊನೇ ಎಸೆತದಲ್ಲಿ 5 ರನ್‌ಗಳ ಅಗತ್ಯವಿದ್ದಾಗ ಸೂಪರ್‌ ಓವರ್‌ ನಿರೀಕ್ಷಿಸಲಾಗಿತ್ತು. ಆದ್ರೆ ಕ್ರೀನಲ್ಲಿದ್ದ ಸಜೀವನ್ ಸಜನ ಸಿಕ್ಸರ್‌ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು.

ಮುಂಬೈ ಇಂಡಿಯನ್ಸ್‌ ಪರ ಯಾಸ್ತಿಕಾ ಭಾಟಿಯಾ 57 ರನ್‌ (45 ಎಸೆತ, 8 ಬೌಂಡರಿ, 2 ಸಿಕ್ಸರ್‌),‌ ಹರ್ಮನ್‌ಪ್ರೀತ್ ಕೌರ್ 55 ರನ್‌ (34 ಎಸೆತ, 7 ಬೌಂಡರಿ, 1 ಸಿಕ್ಸರ್‌) ಚಚ್ಚಿದರೆ, ನಟಾಲಿ ಸ್ಕಿವರ್ ಬ್ರಂಟ್ 19 ರನ್‌, ಅಮೆಲಿಯಾ ಕೆರ್ 24 ರನ್‌, ಪೂಜಾ ವಸ್ತ್ರಕರ್ 1 ರನ್‌, ಅಮನ್ಜೋತ್ ಕೌರ್ 3 ರನ್‌, ಸಜೀವನ್ ಸಜನ 6 ರನ್‌ ಕೊಡುಗೆ ನೀಡಿದ್ರೆ ಹೇಲಿ ಮ್ಯಾಥ್ಯೂಸ್ ಶೂನ್ಯ ಸುತ್ತಿದರು.

ಇನ್ನೂ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಲಿಸ್ ಕ್ಯಾಪ್ಸಿ ಸ್ಪೋಟಕ 75 ರನ್‌ (53 ಎಸತ, 8 ಬೌಂಡರಿ, 3 ಸಿಕ್ಸರ್‌) ಚಚ್ಚಿದರೆ, ಜೆಮಿಮಾ ರೋಡ್ರಿಗ್ಸ್‌ 42 ರನ್‌, ನಾಯಕಿ ಮೆಗ್ ಲ್ಯಾನಿಂಗ್ 31 ರನ್‌, ಮರಿಜಾನ್ನೆ ಕಪ್ 16 ರನ್‌ ಗಳಿದ್ರೆ ಶಫಾಲಿ ವರ್ಮಾ ಕೇವಲ 1 ರನ್‌ಗೆ ವಿಕೆಟ್‌ ಒಪ್ಪಿಸಿದ್ರು. ಅನ್ನಾಬೆಲ್ ಸದರ್ಲ್ಯಾಂಡ್ 1 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

ಮುಂಬೈ ಇಂಡಿಯನ್ಸ್‌ ಪರ ನಟಾಲಿ ಸ್ಕೀವರ್‌ ಬ್ರಂಟ್‌, ಅಮೇಲಿಯಾ ಕೇರ್‌ ತಲಾ 2 ವಿಕೆಟ್‌ ಕಿತ್ತರೆ, ಶಬ್ನಿಮ್ ಇಸ್ಮಾಯಿಲ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು. ಇದನ್ನೂ ಓದಿ: ಮಾ.22 ರಿಂದ IPL ಶುರು; ಉದ್ಘಾಟನಾ ಪಂದ್ಯದಲ್ಲೇ ಚೆನ್ನೈ-ಆರ್‌ಸಿಬಿ ನಡುವೆ ಹೈವೋಲ್ಟೇಜ್‌ ಕದನ!

ಡೆಲ್ಲಿ ಕ್ಯಾಪಿಟಲ್ಸ್‌ ಪರ ಅರುಂಧತಿ ರೆಡ್ಡಿ, ಆಲಿಸ್ ಕ್ಯಾಪ್ಸಿ ತಲಾ 2 ವಿಕೆಟ್‌ ಪಡೆದರೆ, ಶಿಖಾ ಪಾಂಡೆ ಮತ್ತು ಮರಿಜಾನ್ನೆ ಕಪ್ ತಲಾ ಒಂದೊಂದು ವಿಕೆಟ್‌ ಪಡೆದರು.

Share This Article