ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕ ಕಡೆ ಅಪಘಾತ; 8 ಮಂದಿ ದುರ್ಮರಣ

Public TV
1 Min Read

ಬೆಳಗಾವಿ: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕಡೆ ಸಂಭವಿಸಿದ ಭೀಕರ ಅಪಘಾತಗಳಲ್ಲಿ 8 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಿಲ್ಲೆಯ ಯರಗಟ್ಟಿ ತಾಲೂಕಿನ ಕುರಬಗಟ್ಟಿ ಕ್ರಾಸ್ ಬಳಿ ಎರಡು ಕಾರುಗಳ ನಡುವೆ ಡಿಕ್ಕಿಯಾಗಿ ಮೂವರು ಹಾಗೂ ಮುಗಳಖೋಡ ಕಾಲುವೆ ಬಳಿ ಕಾರು-ಬೈಕ್‌ ನಡುವೆ ಅಪಘಾತವಾಗಿ 5 ಮಂದಿ ಮೃತಪಟ್ಟಿದ್ದಾರೆ.

ಕುರಬಗಟ್ಟಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಮುತ್ತು ಸತ್ಯಪ್ಪ ನಾಯ್ಕ (8), ಗೋಪಾಲ ಸತ್ಯಪ್ಪ ನಾಯ್ಕ (45), ಧಾರವಾಡ ಮೂಲದ ಅನ್ನಪೂರ್ಣ ಬಾಳೇಶ ಶಿರೋಳ (53) ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ದುಬೈನಲ್ಲಿ ಏರ್‌ಪೋರ್ಟ್ ಅಧಿಕಾರಿಯಾಗಿದ್ದ ಮಂಗಳೂರು ಯುವತಿ ಅಪಘಾತದಲ್ಲಿ ಸಾವು

ಸ್ವಿಫ್ಟ್‌ ಮತ್ತು ಅಲ್ಟೋ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು. ಸ್ವಿಫ್ಟ್‌ ಕಾರಿನಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.

ರಾಯಬಾಗ ತಾಲೂಕಿನ ಮುಗಳಖೋಡ ಕಾಲುವೆ ಬಳಿ ಬೈಕ್‌ ಮತ್ತು ಕಾರಿನ ಮಧ್ಯೆ ಸಂಭವಿಸಿದ ಮತ್ತೊಂದು ಅಪಘಾತಕ್ಕೆ ಐವರು ಬಲಿಯಾಗಿದ್ದಾರೆ. ಕಾರು ಮೊದಲು ಬೈಕ್ ಸವಾರನಿಗೆ ಗುದ್ದಿ ನಂತರ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹಾರೂಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಳೆ ವ್ಯಾಪಾರಿಗಳ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಲ್ಲಿಕಾರ್ಜುನ್ ಮರಾಠೆ (16) ,ಲಕ್ಷ್ಮೀ ಮರಾಠೆ (19), ಆಕಾಶ ಮರಾಠೆ (14) ಹಾಗೂ ಕಾರ ಚಾಲಕ ಶ್ರೀಕಾಂತ ಪಡತರಿ (22) ಮೃತಪಟ್ಟಿದ್ದಾರೆ. ಬೈಕ್ ಸವಾರ ನಾಗಪ್ಪ ಯಡವನ್ನವರ್ (48) ಕೂಡ ಅಪಘಾತಕ್ಕೆ ಬಲಿಯಾಗಿದ್ದಾರೆ.

Share This Article