ಅಯೋಧ್ಯೆಯಲ್ಲಿ ಜನಸಾಗರ- ರಾಮಲಲ್ಲಾನ ದರ್ಶನಕ್ಕೆ ಓಡೋಡಿ ಬರುತ್ತಿರೋ ಭಕ್ತರು

Public TV
1 Min Read

‌- ಇನ್ಮುಂದೆ ನಿತ್ಯ 1 ಗಂಟೆ ರಾಮಮಂದಿರ ಬಂದ್

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಾಮಲಲ್ಲಾನ (Ayodhya Ram Mandir) ಪ್ರಾಣಪ್ರತಿಷ್ಠಾನೆ ಆದಾಗಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಇಂದು ಕೂಡ ಅಯೋಧ್ಯೆಯಲ್ಲಿ ಜನಸಾಗರವೇ ನೆರೆದಿದೆ.

ಕಳೆದ ವೀಕೆಂಡ್‌ನಲ್ಲಿಯೂ ಜನಸಂದಣಿ ದಟ್ಟವಾಗಿಯೇ ಇತ್ತು. ಅಂತೆಯೇ ಈ ಭಾನುವಾರವೂ ಅಯೋಧ್ಯೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಮುಂಜಾನೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಬೆಳಗ್ಗೆಯಾಗುತ್ತಿದ್ದಂತೆಯೇ ಅಯೋಧ್ಯೆಯಲ್ಲಿ ಜನಸಂದಣಿ ಹೆಚ್ಚಾಗಿದ್ದು, ರಾಮಲಲ್ಲಾನ ದರ್ಶನ ಪಡೆಯಲೆಂದು ಭಕ್ತರು ಓಡೋಡಿ ಬರುತ್ತಿದ್ದಾರೆ.

ಕಳೆದ ವಾರ ವೀಕೆಂಡ್‌ ಹಾಗೂ ಅಮಾವಾಸ್ಯೆ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಭಕ್ತ ಸಾಗರವೇ ಹರಿದುಬಂದಿತ್ತು. ಫೆ.10ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದರು. ಸಾವಿರಾರು ಮಂದಿ ಭಕ್ತರು ಪ್ರಯಾಗ್ ರಾಜ್ ನಲ್ಲಿ ಪುಣ್ಯಸ್ನಾನ ಮಾಡಿ ರಾಮ ಮಂದಿರದತ್ತ ದೌಡಾಯಿಸುತ್ತಿರುವ ವೀಡಿಯೋ ಕೂಡ ವೈರಲ್‌ ಆಗಿತ್ತು.

ಭಕ್ತರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ವಿಐಪಿ ಗೇಟ್ ಕೂಡ ತೆರೆಯಲಾಗಿತ್ತು. ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಇನ್ನೊಂದೆಡೆ ಭಕ್ತರಿಗೆ ಲಾಕರ್ ವ್ಯವಸ್ಥೆ ಸಿಗದಿದ್ದರಿಂದ ಮೊಬೈಲ್ ಫೋನ್, ಲಗೇಜ್ ಜೊತೆಯೇ ಮಂದಿರದೊಳಗೆ ನುಗಿದ್ದರು.

ನಿತ್ಯ ಮಧ್ಯಾಹ್ನ 1 ಗಂಟೆ ಬಂದ್:‌ ಇನ್ನು ಮುಂದೆ ರಾಮಮಂದಿರವನ್ನು ಪ್ರತಿನಿತ್ಯ ಮಧ್ಯಾಹ್ನದ ವೇಳೆ 1 ಗಂಟೆಗಳ ಕಾಲ ಮುಚ್ಚಲಾಗುತ್ತದೆ ಎಂದು ಮುಖ್ಯ ಅರ್ಚಕರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಮಂಡಲರಾಧನೆಗೆ ಬಾಗಲಕೋಟೆ ಅರ್ಚಕ ಆಯ್ಕೆ

ಬಂದ್‌ ಮಾಡುವುದು ಯಾಕೆ..?: ರಾಮಲಲ್ಲಾ 5 ವರ್ಷದ ಪುಟ್ಟ ಮಗು. ಹೀಗಾಗಿ ಆತ ದೀರ್ಘಕಾಲ ಎಚ್ಚರವಿದ್ದು, ಹೆಚ್ಚು ಒತ್ತಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ರಾಂತಿಗಾಗಿ ಮಧ್ಯಾಹ್ನ 12:30 ಯಿಂದ 1:30 ವರೆಗೆ ಮುಚ್ಚಲು ತೀರ್ಮಾನಿಸಿರುವುದಾಗಿ ದೇಗುಲದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಮಾಹಿತಿ ನೀಡಿದ್ದಾರೆ.

Share This Article