ಅಯೋಧ್ಯೆಗೆ ಹೊರಟಿದ್ದ ವಿಶೇಷ ರೈಲಿಗೆ ಕಲ್ಲು ತೂರಾಟ

Public TV
1 Min Read

ಮುಂಬೈ: ಗುಜರಾತ್‌ನ ಸೂರತ್‌ನಿಂದ ಅಯೋಧ್ಯೆಗೆ (Ayodhya) ತೆರಳುತ್ತಿದ್ದ ಆಸ್ತಾ ವಿಶೇಷ ರೈಲಿಗೆ (Aastha Special Train) ಮಹಾರಾಷ್ಟ್ರದ ನಂದೂರ್‌ಬಾರ್ ಬಳಿ ಭಾನುವಾರ ತಡರಾತ್ರಿ ಕಲ್ಲು ತೂರಾಟ ನಡೆದಿದೆ.

ಆಸ್ತಾ ವಿಶೇಷ ರೈಲಿಗೆ ಭಾನುವಾರ ರಾತ್ರಿ 8 ಗಂಟೆಗೆ ಚಾಲನೆ ನೀಡಲಾಗಿತ್ತು. ಒಟ್ಟು 1,340 ಪ್ರಯಾಣಿಕರಿದ್ದರು ರೈಲಿನಲ್ಲಿದ್ದರು. ರಾತ್ರಿ 10:45 ಕ್ಕೆ ನಂದೂರ್ಬಾರ್ ಬಳಿ ರೈಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಪ್ರಯಾಣಿಕರ ಆತಂಕಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕುಟುಂಬ ಸಮೇತರಾಗಿ ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ದೆಹಲಿ ಸಿಎಂ

ದಾಳಿಯ ಸಮಯದಲ್ಲಿ ಕೆಲವು ಪ್ರಯಾಣಿಕರು ತಕ್ಷಣ ಎಚ್ಚೆತ್ತು ಕಿಟಕಿಯ ಗಾಜನ್ನು ಮುಚ್ಚಿದ್ದಾರೆ. ಆದರೂ ಕೆಲವು ಕಲ್ಲುಗಳು ಕೋಚ್‌ನೊಳಗೆ ನುಗ್ಗಿವೆ ಎಂದು ನಂದೂರ್‌ಬಾರ್‌ನ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಸಂಜಯ್ ಮಹಾಜನ್ ತಿಳಿಸಿದ್ದಾರೆ.

ನಂದೂರ್ಬಾರ್ ರೈಲ್ವೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮಹಾಜನ್ ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ತಡರಾತ್ರಿ ನಂದೂರ್ಬಾರ್ ರೈಲು ನಿಲ್ದಾಣದಿಂದ ರೈಲನ್ನು ಕಳುಹಿಸಿದ್ದಾರೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಸೋನಿಯಾ ಗಾಂಧಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧೆ?

ಭಾನುವಾರದಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ದರ್ಶನ ಜರ್ದೋಶ್ ಅವರು, ಅಯೋಧ್ಯಾ ಧಾಮ್- ವಿಶೇಷ ಪ್ರವಾಸಿ ‘ಆಸ್ತಾ’ ರೈಲಿಗೆ ಸೂರತ್ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಅಯೋಧ್ಯೆಗೆ ಹಸಿರು ನಿಶಾನೆ ತೋರಿದ್ದರು. ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ಬಾಲಕರಾಮನ ದರ್ಶನಕ್ಕೆ ತೆರಳುವ ಭಕ್ತರಿಗೆ ಸಚಿವರು ಶುಭ ಹಾರೈಸಿದ್ದರು.

ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ರಾಮಲಲ್ಲಾನ ದರ್ಶನಕ್ಕಾಗಿ ಭಾರತೀಯ ರೈಲ್ವೆಯು ಭಾರತದಾದ್ಯಂತ ವಿವಿಧ ನಗರಗಳು ಮತ್ತು ಶ್ರೇಣಿ 1 ಮತ್ತು ಶ್ರೇಣಿ 2 ಪಟ್ಟಣಗಳಿಂದ 200 ಕ್ಕೂ ಹೆಚ್ಚು ಆಸ್ತಾ ವಿಶೇಷ ರೈಲುಗಳನ್ನು ಅಯೋಧ್ಯೆ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿದೆ. ಪ್ರತಿ ಆಸ್ತಾ ರೈಲು 20 ಸ್ಲೀಪರ್ ಕೋಚ್‌ಗಳನ್ನು ಒಳಗೊಂಡಿದೆ. ಒಂದು ರೈಲಿನಲ್ಲಿ 1,400 ಜನರು ಪ್ರಯಾಣ ಮಾಡಬಹುದು.

Share This Article