ಭಾರತಕ್ಕೆ ದೊಡ್ಡ ಗೆಲುವು – ಕತಾರ್‌ನಲ್ಲಿ ಅರೆಸ್ಟ್‌ ಆಗಿದ್ದ ನೌಕಾ ಅಧಿಕಾರಿಗಳು ಬಿಡುಗಡೆ, ಸ್ವದೇಶಕ್ಕೆ ವಾಪಸ್‌

Public TV
2 Min Read

– ಮೋದಿಗೆ ಧನ್ಯವಾದ ಹೇಳಿದ ನಿವೃತ್ತ ಅಧಿಕಾರಿಗಳು

ನವದೆಹಲಿ: ಭಾರತ ಸರ್ಕಾರಕ್ಕೆ (Indian Government) ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದ್ದು, ಗೂಢಚರ್ಯೆ (Espionage) ಪ್ರಕರಣದಲ್ಲಿ ಕತಾರ್‌ ಜೈಲಿನಲ್ಲಿದ್ದ (Qatar Jail) ಎಂಟು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳು ಬಿಡುಗಡೆಯಾಗಿದ್ದಾರೆ.

ಎಂಟು ಮಂದಿ ಪೈಕಿ ಏಳು ಮಂದಿ 18 ತಿಂಗಳ ಜೈಲು ವಾಸದ ನಂತರ ಈಗಾಗಲೇ ಭಾರತಕ್ಕೆ (India) ಮರಳಿದ್ದಾರೆ.  ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದ್ವಾದಶಿ ಸಂಭ್ರಮ

ಕತಾರ್‌ನಲ್ಲಿ ಬಂಧಿತರಾಗಿರುವ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯರ ಬಿಡುಗಡೆಯನ್ನು ಭಾರತ ಸರ್ಕಾರ ಸ್ವಾಗತಿಸುತ್ತದೆ. ಎಂಟು ಮಂದಿಯಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಈ ಪ್ರಜೆಗಳ ಬಿಡುಗಡೆಗೊಳಿಸಲು ಕಾರಣರಾದ ಕತಾರ್‌ ರಾಜ್ಯದ ಅಮೀರ್‌ ಅವರ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಟ, ಕಮಾಂಡರ್ ಪೂರ್ಣೇಂದು ತಿವಾರಿ, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕಮಾಂಡರ್ ಸುಗುಣಾಕರ್ ಪಾಕಾಳ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗ್ಪಾಲ್ ಮತ್ತು ನಾವಿಕ ರಾಗೇಶ್ ಅವರು ಕತಾರ್ ಸೇನಾ ಪಡೆಗಳಿಗೆ ತರಬೇತಿ ನೀಡುವ ಓಮನ್ ಮೂಲದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಗೂಢಚರ್ಯೆ ಆರೋಪದ ಮೇರೆಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಇವರನ್ನು ಬಂಧಿಸಲಾಗಿತ್ತು. ವಿಚಾರಣೆ ಬಳಿಕ ಅಕ್ಟೋಬರ್‌ನಲ್ಲಿ 8 ಮಂದಿಗೆ ಶಿಕ್ಷೆ ವಿಧಿಸಲಾಗಿತ್ತು. ಇದನ್ನೂ ಓದಿ: ಒಂದೇ ಬೈಕ್ ಮೇಲೆ 300 ಕೇಸ್ – ಬರೋಬ್ಬರಿ 3 ಲಕ್ಷ ದಂಡ

ಗಲ್ಲು ಶಿಕ್ಷೆ ವಿಧಿಸಿದ್ದನ್ನು ಭಾರತ ಸರ್ಕಾರ ಪ್ರಶ್ನೆ ಮಾಡಿತ್ತು. ಕಳೆದ ಡಿಸೆಂಬರ್‌ನಲ್ಲಿ ಎಂಟು ಅಧಿಕಾರಿಗಳಿಗೆ ಗಲ್ಲು ಶಿಕ್ಷೆ ರದ್ದು ಮಾಡಿ ಕತಾರ್ ಕೋರ್ಟ್ (Qatar Court) ತೀರ್ಪು ನೀಡಿತ್ತು. ಈ ಮೂಲಕ ಕಾನೂನು ಸಮರದಲ್ಲಿ ಭಾರತ ಸರ್ಕಾರಕ್ಕೆ (Indian Government) ಮೊದಲ ಗೆಲುವು ಸಿಕ್ಕಿತ್ತು.

ಭಾರತಕ್ಕೆ ಮರಳಿದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ ಎಂದು ಹೇಳಲು ನಮಗೆ ತುಂಬಾ ಸಂತೋಷವಾಗಿದೆ. ನಾವು ಪ್ರಧಾನಿ ಮೋದಿಯವರಿಗೆ (PM Narendra Modi) ಧನ್ಯವಾದ ಹೇಳಲು ಬಯಸುತ್ತೇವೆ. ಅವರ ವೈಯಕ್ತಿಕ ಹಸ್ತಕ್ಷೇಪದಿಂದ ನಮ್ಮ ಬಿಡುಗಡೆ ಸಾಧ್ಯವಾಗಿದೆ  ಎಂದು ಹೇಳಿದರು.

ನಾವು ಭಾರತಕ್ಕೆ ಮರಳಲು ಸುಮಾರು 18 ತಿಂಗಳುಗಳ ಕಾಲ ಕಾಯುತ್ತಿದ್ದೆವು. ನಾವು ಪ್ರಧಾನಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ. ಅವರ ವೈಯಕ್ತಿಕ ಹಸ್ತಕ್ಷೇಪ ಮತ್ತು ಕತಾರ್‌ನೊಂದಿಗಿನ ಅವರ ಸ್ನೇಹ ಇಲ್ಲದೇ ಇದ್ದರೆ ನಾವು ಬಿಡುಗಡೆಯಾಗುತ್ತಿರಲಿಲ್ಲ. ನಮ್ಮ ಬಿಡುಗಡೆಗೆ ಭಾರತ ಸರ್ಕಾರ ಮಾಡಿದ ಪ್ರತಿಯೊಂದು ಪ್ರಯತ್ನಕ್ಕೆ ನಾವು ಧನ್ಯವಾದ ಹೇಳುತ್ತಿದ್ದೇವೆ ಎಂದು ತಿಳಿಸಿದರು.

 

Share This Article