ನಿಮ್ಮ ಪೋಷಕರು ನನಗೆ ಮತ ಹಾಕದಿದ್ರೆ 2 ದಿನ ಊಟ ಮಾಡ್ಬೇಡಿ- ಶಾಸಕರ ವಿವಾದಾತ್ಮಕ ಹೇಳಿಕೆ

Public TV
1 Min Read

‌-ಶಾಲಾ ಮಕ್ಕಳಿಗೆ ಹೇಳಿದ ಸಂತೋಷ್ ಬಂಗಾರ್ ವೀಡಿಯೋ ವೈರಲ್

ಮುಂಬೈ: ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಕಲಂನೂರಿ ಶಾಸಕ ಸಂತೋಷ್ ಬಂಗಾರ್ (Santosh Bangar) ಅವರು ಹೇಳಿಕೆಯೊಂದನ್ನು ನೀಡಿ ಇದೀಗ ಭಾರೀ ವಿವಾದಕ್ಕೀಡಾಗಿದ್ದಾರೆ.

ಚುನಾವಣಾ ಆಯೋಗವು (Election Commission) ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದರ ವಿರುದ್ಧ ನಿರ್ದೇಶನಗಳನ್ನು ನೀಡಿದ ಬಳಿಕ ಸಂತೋಷ್‌ ಬಂಗಾರ್‌ ಹೇಳಿಕೆಯ ವೀಡಿಯೋ ವೈರಲ್‌ ಆಗಿದೆ.

ವೀಡಿಯೋದಲ್ಲಿ ಏನಿದೆ..?: ಹಿಂಗೋಲಿ ಜಿಲ್ಲೆಯ ಜಿಲ್ಲಾ ಪರಿಷತ್ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕರು, ಮುಂದಿನ ಚುನಾವಣೆಯಲ್ಲಿ ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಎರಡು ದಿನ ಊಟ ಮಾಡಬೇಡಿ ಎಂದು ಹೇಳಿದ್ದಾರೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕೆಂದು ಪೋಷಕರ ಮುಂದೆಯೇ ಶಾಲಾ ಮಕ್ಕಳನ್ನು ಕೇಳಿದ್ದಾರೆ.

ಶಾಸಕರ ಹೇಳಿಕೆ ವಿರುದ್ಧ ಕಾಂಗ್ರೆಸ್ (Congress) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (NCP) ಕಿಡಿಕಾರಿದ್ದು, ಕ್ರಮಕ್ಕೆ ಒತ್ತಾಯಿಸಿವೆ. ಎನ್‌ಸಿಪಿ-ಎಸ್‌ಪಿ ವಕ್ತಾರ ಕ್ಲೈಡ್ ಕ್ರಾಸ್ಟೊ ಮಾತನಾಡಿ, ಬಂಗಾರ್ ಅವರು ಶಾಲಾ ಮಕ್ಕಳಿಗೆ ಹೇಳಿರುವುದು ಚುನಾವಣಾ ಆಯೋಗದ ನಿರ್ದೇಶನಕ್ಕೆ ವಿರುದ್ಧವಾಗಿದೆ. ಆದ್ದರಿಂದ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇತ್ತ ತಮ್ಮ ಪಕ್ಷದ ಶಾಸಕರೊಬ್ಬರು ಶಾಲಾ ಮಕ್ಕಳಿಗೆ ಈ ರೀತಿ ಹೇಳಿಕೆ ನೀಡುತ್ತಿರುವಾಗ ರಾಜ್ಯದ ಶಿಕ್ಷಣ ಸಚಿವರು ನಿದ್ದೆ ಮಾಡುತ್ತಿದ್ದಾರಾ ಎಂದು ಕಾಂಗ್ರೆಸ್ ಮುಖಂಡ ವಿಜಯ್ ವಡೆತ್ತಿವಾರ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಂಗಾರ್ ಇಂತಹ ವಿಚಿತ್ರ ಹೇಳಿಕೆಗಳನ್ನು ನೀಡುವುದು ಇದೇ ಮೊದಲಲ್ಲ. ಈ ಹಿಂದೆಯೇ ಅವರು ತಮ್ಮ ಆಘಾತಕಾರಿ ಹೇಳಿಕೆಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಕಳೆದ ತಿಂಗಳು 2024 ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗದಿದ್ದರೆ ನೇಣು ಹಾಕಿಕೊಳ್ಳುವುದಾಗಿ ಹೇಳಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಹಬ್ಬದ ರ್ಯಾಲಿಯಲ್ಲಿ ಕತ್ತಿ ಝಳಪಿಸಿದ್ದರು ಎಂಬ ಆರೋಪದ ಮೇಲೆ ಕಲಂನೂರಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಹೀಗೆ ಇಂತಹ ಹಲವು ಘಟನೆಗಳಿಗೆ ಶಾಸಕರು ಕಾರಣರಾಗಿದ್ದಾರೆ.

Share This Article