ಮನಮೋಹನ್‌ ಸಿಂಗ್‌ರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

Public TV
1 Min Read

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ (Manmohan Singh) ಅವರನ್ನು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು ಹಾಡಿ ಹೊಗಳಿದ್ದಾರೆ.

ನಿವೃತ್ತರಾಗಲಿರುವ ರಾಜ್ಯಸಭಾ (Rajya Sabha) ಸದಸ್ಯರ ಬೀಳ್ಕೊಡುಗೆ ಸಂದರ್ಭದಲ್ಲಿ ಸದನವನ್ನುದ್ದೇಶಿಸಿ ಮಾತನಾಡಿದ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶಕ್ಕೆ ಸಲ್ಲಿಸಿದ ಕೊಡುಗೆ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅವರಿಗಿರುವ ಬದ್ಧತೆಯನ್ನು ಶ್ಲಾಘಿಸಿದರು.

ನಾನು ಇಂದು ಮನಮೋಹನ್‌ ಸಿಂಗ್‌ ಅವರನ್ನು ಸ್ಮರಿಸುತ್ತೇನೆ. ಅವರ ಕೊಡುಗೆ ಅಪಾರವಾಗಿದೆ. ಡಾ.ಮನಮೋಹನ್ ಸಿಂಗ್ ಅವರು ಇಷ್ಟು ದಿನ ಈ ಸದನ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದ ರೀತಿ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದರು. ಇದನ್ನೂ ಓದಿ: 48 ವರ್ಷಗಳ ಬಳಿಕ ದಿಢೀರ್‌ ಕಾಂಗ್ರೆಸ್‌ ತೊರೆದ ಮಾಜಿ ಸಚಿವ ಬಾಬಾ ಸಿದ್ದಿಕ್

ಸದನದಲ್ಲಿ ಮತದಾನದ ವೇಳೆ ಆಡಳಿತ ಪಕ್ಷವೇ ಗೆಲ್ಲುತ್ತದೆ ಎಂದು ಗೊತ್ತಿದ್ದರೂ ಡಾ.ಮನಮೋಹನ್ ಸಿಂಗ್ ವ್ಹೀಲ್‌ ಚೇರ್‌ನಲ್ಲಿ ಬಂದು ಮತ ಚಲಾಯಿಸಿದ್ದು ಕೂಡ ನನಗೆ ಚೆನ್ನಾಗಿ ನೆನಪಿದೆ. ಅವರು ಯಾರಿಗೆ ಅಧಿಕಾರ ಕೊಡಲು ಬಂದಿದ್ದರು ಎಂಬುದು ಪ್ರಶ್ನೆಯಲ್ಲ. ಅವರು ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡಲು ಬಂದಿದ್ದರು ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಸದಸ್ಯರು ತಮ್ಮ ಕರ್ತವ್ಯಗಳ ಬಗ್ಗೆ ಎಚ್ಚರವಾಗಿರುವುದಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ. ಅಲ್ಲದೇ ಮನಮೋಹನ್ ಸಿಂಗ್ ಎಲ್ಲ ಸಂಸದರಿಗೆ ಸ್ಫೂರ್ತಿ ಎಂದು ಮೋದಿ ಬಣ್ಣಿಸಿದರು.

ದೆಹಲಿಯಲ್ಲಿರುವ ಸಭಾಪತಿ ಜಗದೀಪ್ ಧನಖರ್ ಅವರ ನಿವಾಸದಲ್ಲಿ ಇಂದು ನಿವೃತ್ತಿಯಾಗುವ ರಾಜ್ಯಸಭಾ ಸದಸ್ಯರಿಗೆ ಬೀಳ್ಕೊಡುಗೆ ನೀಡಲಾಗುತ್ತಿದೆ. ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ರಾಜ್ಯಸಭಾ ಸದಸ್ಯರು ಗ್ರೂಪ್ ಫೋಟೋದಲ್ಲಿ ಭಾಗವಹಿಸಿದ್ದರು. ಸಂಜೆ 6.30ಕ್ಕೆ ಸಭಾಪತಿ ನಿವಾಸದಲ್ಲಿ ನಿವೃತ್ತಿಯಾಗುವ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

Share This Article