UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

By
3 Min Read

– UCC ಮಸೂದೆಯಲ್ಲಿ ಏನಿದೆ?

ಡೆಹ್ರಾಡೂನ್‌: ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ನೇತೃತ್ವದ ಸರ್ಕಾರವು ಮಂಡಿಸಿದ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ಬುಧವಾರ (ಫೆ.7) ಅಂಗೀಕರಿಸಿದೆ. ಈ ಮೂಲಕ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನೂ ಬಿಜೆಪಿ ಆಡಳಿತವಿರುವ ರಾಜಸ್ಥಾನ ಸರ್ಕಾರವೂ ಯುಸಿಸಿ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. ಮುಂದಿನ ಅಧಿವೇಶನದಲ್ಲೇ ಕಾಯ್ದೆ ಅನುಷ್ಠಾನಗೊಳಿಸುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಕೀಯ ಸ್ವಾರ್ಥಕ್ಕಾಗಿ ದೇಶ ಒಡೆಯುವ ಮಾತು, ರಾಷ್ಟ್ರವೆಂದರೆ ಕೇವಲ ಒಂದು ತುಂಡು ಭೂಮಿ ಅಲ್ಲ: ಡಿಕೆ ಸುರೇಶ್‌ ಹೇಳಿಕೆ ವಿರುದ್ಧ ಮೋದಿ ಕಿಡಿ 

ಯುಸಿಸಿ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರವಾದ ಬೆನ್ನಲ್ಲೇ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಉತ್ತರಾಖಂಡಕ್ಕೆ ಮಹತ್ವದ ದಿನವಾಗಿದೆ. ದೇಶಾದ್ಯಂತ ಜನರು ಬಹಳ ದಿನಗಳಿಂದ ಕಾಯುತ್ತಿದ್ದ ಮಸೂದೆಯನ್ನು ನಾವು ಅಂಗೀಕರಿಸಿದ್ದೇವೆ. ಯುಸಿಸಿ ಅನುಷ್ಠಾನಗೊಳಿಸಿದ ದೇಶದ ಮೊದಲ ರಾಜ್ಯವೂ ಉತ್ತರಾಖಂಡವೇ (Uttarakhand) ಆಗಿದೆ ಎಂದು ಶ್ಲಾಘಿಸಿದ್ದಾರೆ.

ಮಸೂದೆಯಲ್ಲಿ ಏನಿದೆ?
ರಾಜ್ಯದ ಮುಸ್ಲಿಮರು (Muslims) ಸೇರಿದಂತೆ ಎಲ್ಲಾ ಧರ್ಮದವರು 2ನೇ ವಿವಾಹವಾಗುವುದು ಅಪರಾಧ. ಒಬ್ಬ ವ್ಯಕ್ತಿಗೆ ಒಂದು ಮದುವೆಗೆ ಮಾತ್ರ ಕಾನೂನಿನ ಮಾನ್ಯತೆ ಇರಲಿದೆ. ಹಾಲಿ ಷರಿಯಾ ಕಾನೂನಿನಡಿ ಮುಸ್ಲಿಮರು ಕಾನೂನು ಬದ್ಧವಾಗಿಯೇ 3 ವಿವಾಹವಾಗುವ ಅವಕಾಶವಿದೆ. ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವ ಎಲ್ಲಾ ವಿಚಾರದಲ್ಲಿ ಎಲ್ಲಾ ಧರ್ಮದ ಜನರಿಗೆ ಒಂದೇ ನಿಯಮ ಅನ್ವಯವಾಗುತ್ತದೆ. ಇದನ್ನೂ ಓದಿ: ಕಾಂಗ್ರೆಸ್‌ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ

ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ ಮಾಡಲಾಗಿದೆ. ನೋಂದಣಿ 1 ತಿಂಗಳು ತಡವಾದರೆ 3 ತಿಂಗಳು ಜೈಲು, 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನೋಂದಣಿ ಸಂಶಯಾಸ್ಪದವಾಗಿದ್ದರೆ ತನಿಖೆ ನಡೆಸಲಾಗುತ್ತದೆ. ಲಿವ್ ಇನ್ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಕಾನೂನು ಮಾನ್ಯತೆ ಸೇರಿದಂತೆ ಆಸ್ತಿಯಲ್ಲೂ ಸಮಪಾಲು ಸಿಗಲಿದೆ. ಲಿವ್ ಇನ್ ಸಂಗಾತಿ ತೊರೆದಲ್ಲಿ ಜೀವನಾಂಶ ಪಡೆಯಬಹುದು. ಸಂಬಂಧ ಮುಂದುವರಿಸಲು ಇಷ್ಟವಿಲ್ಲದ ಜೋಡಿ, ದಾಖಲೆಗಳನ್ನು ಸಲ್ಲಿಸಿ ಲಿಖಿತ ಹೇಳಿಕೆ ನೀಡಿ ಲಿವ್‌ ಇನ್‌ ಸಂಬಂಧ ಕಡಿತಗೊಳಿಸಬಹುದು. ಈ ಮಸೂದೆಯಿಂದ ಬುಡಕಟ್ಟು ಸಮುದಾಯವನ್ನು ಹೊರಗಿಡಲಾಗಿದೆ.

ಅತ್ಯಾಚಾರ ಅಥವಾ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿದ ಪತಿಗೆ ವಿಚ್ಛೇದನ ನೀಡುವ ಹಕ್ಕನ್ನು ಮಸೂದೆ ಮಹಿಳೆಯರಿಗೆ ನೀಡುತ್ತದೆ. ಮದುವೆಯಾದ ಒಂದೇ ವರ್ಷದೊಳಗೆ ವಿವಾಹ ವಿಚ್ಛೇದನ ಪಡೆಯುವುದನ್ನು ಅಸಾಧಾರಣ ಸಂದರ್ಭ ಹೊರತುಪಡಿಸಿ ಉಳಿದ ಸನ್ನಿವೇಶಗಳಲ್ಲಿ ನಿರ್ಬಂಧಿಸುವ ಅಂಶವಿದೆ. ಅತ್ಯಾಚಾರ ಪ್ರಕರಣದಲ್ಲಿ ಪತಿ ಪತಿ ಸಿಲುಕಿದರೆ ಆತನಿಂದ ಪತ್ನಿ ವಿಚ್ಛೇದನ ಕೇಳಬಹುದು. ಇದನ್ನೂ ಓದಿ: ಯಾವುದೇ ಧರ್ಮದವರಿಗೂ 2ನೇ ಮದುವೆ ಅವಕಾಶವಿಲ್ಲ, ಲಿವ್ ಇನ್ ಸಂಬಂಧಕ್ಕೆ ನೋಂದಣಿ ಕಡ್ಡಾಯ – UCC ಮಸೂದೆಯಲ್ಲಿ ಏನಿದೆ?

ವಿವಾಹವಾದ 60 ದಿನದ ಒಳಗಡೆ ನೋಂದಣಿ ಮಾಡಿಸಬೇಕು. 2010ರ ಮಾ.26ರ ನಂತರ ಮದುವೆಯಾದವರು 6 ತಿಂಗಳೊಳಗೆ ನೋಂದಣಿ ಮಾಡಿಸುವುದು ಕಡ್ಡಾಯ. ನಿರ್ಲಕ್ಷಿಸಿದರೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ನೋಂದಣಿಯಾಗದ ವಿವಾಹವನ್ನು ಅಸಿಂಧು ಎಂದು ಪರಿಗಣನೆ ಮಾಡುವುದಿಲ್ಲ.

Share This Article