ತುಮಕೂರಿನಲ್ಲಿ ತೆರೆಮರೆಯಲ್ಲಿ ಪ್ರಚಾರ ಆರಂಭಿಸಿದ ವಿ. ಸೋಮಣ್ಣ!

By
1 Min Read

ತುಮಕೂರು: ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲ ಎನ್ನುತ್ತಲೇ ಮಾಜಿ ಸಚಿವ ವಿ.ಸೋಮಣ್ಣ (V Somanna) ಸೈಲೆಂಟಾಗಿ ತಯಾರಿ ನಡೆಸುತ್ತಿದ್ದಾರೆ. ತುಮಕೂರು ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಸೋಮಣ್ಣ ತೆರೆಯ ಮರೆಯಲ್ಲೇ ಮುಖಂಡರನ್ನು ಭೇಟಿಯಾಗಿ ಕೋಟೆ ಭದ್ರಗೊಳಿಸುತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸೋತು, ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಸೆಟೆದು ನಿಂತಿದ್ದ ಸೋಮಣ್ಣ ತುಮಕೂರು (Tumakuru) ಲೋಕಸಭಾ ಕ್ಷೇತ್ರದ ಮೇಲೆ ನೆಟ್ಟಿದ್ದ ದೃಷ್ಟಿ ಈಗ ಗಟ್ಟಿಯಾಗುತ್ತಿದೆ. ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದ ವಿ.ಸೋಮಣ್ಣ ನಾನು ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದೇನೆ ಲೋಕಸಭೆಗೆ (Lok Sabha) ಆಕಾಂಕ್ಷಿ ಅಲ್ಲ ಎಂದಿದ್ದರು. ಇದನ್ನೂ ಓದಿ: 29 ರೂ.ಗೆ ಸಿಗಲಿಗೆ ʻಭಾರತ್‌ ಅಕ್ಕಿʼ – ಎಲ್ಲೆಲ್ಲಿ ಮಾರಾಟ?

ಈ ಮಧ್ಯೆ ಮೈತ್ರಿ ಪಕ್ಷದ ವರಿಷ್ಠರಾದ ಎಚ್‌ಡಿ ದೇವೇಗೌಡರು, ಎಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಇದಕ್ಕೆ ದೊಡ್ಡಗೌಡರು (Devegowda) ಪರೋಕ್ಷವಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ಹುರುಪಿನಿಂದ ತುಮಕೂರಿನತ್ತ ಸೋಮಣ್ಣ ಬಲವಾದ ಹೆಜ್ಜೆ ಇಟ್ಟಿದ್ದಾರೆ.

ತುಮಕೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮುದ್ದಹನುಮೇಗೌಡ ಕಾಂಗ್ರೆಸ್ ಸೇರುವುದು ಬಹುಪಾಲು ಖಚಿತ. ಇವರನ್ನು ಹೊರತುಪಡಿಸಿದ್ರೆ ಲಿಂಗಾಯತ ಸಮುದಾಯದ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ ಹಾಗೂ ಸಿದ್ದಗಂಗಾ ಆಸ್ಪತ್ರೆ ವೈದ್ಯ, ಸಂಘ ನಿಷ್ಠ ಡಾ.ಪರಮೇಶ್ವರ್ ಆಕಾಂಕ್ಷಿತರಲ್ಲಿ ಮುಂಚೂಣಿಯಲಿದ್ದಾರೆ. ಇವರನ್ನು ಹಿಂದಿಕ್ಕಿ ಸೋಮಣ್ಣ ಟಿಕೆಟ್‌ಗಾಗಿ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ನಿರ್ಮಲಾ ಸೀತಾರಾಮನ್‌ ಪಿಎ ಹೆಸರು ಹೇಳಿ ಧೋನಿ ಮ್ಯಾನೇಜರ್‌ಗೆ ಲಕ್ಷ ಲಕ್ಷ ವಂಚನೆ

ಟಿಕೆಟ್ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಜಿಲ್ಲೆಯಲ್ಲಿ ಸೋಮಣ್ಣ ಓಡಾಟ ಆರಂಭಿಸಿದ್ದಾರೆ. ತಿಪಟೂರಿನ ನೊಣವಿನಕೆರೆ ಮಠ, ಗುಬ್ಬಿಯ ಚೆನ್ನಕೇಶವ ದೇವಸ್ಥಾನ, ವಿವಿಧ ಸಮುದಾಯಗಳ ಮುಖಂಡರ ಮನೆಗೆ ಭೇಟಿಯಾಗುತ್ತಾ ತೆರೆಮರೆಯಲ್ಲಿ ತಯಾರಿ ಆರಂಭಿಸಿದ್ದಾರೆ.

ಲಿಂಗಾಯತರ ಪ್ರಾಬಲ್ಯ ಇರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಮತ್ತೊಮ್ಮೆ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ. ಸೋಮಣ್ಣರ ಕನಸು ನನಸಾಗುತ್ತಾ? ಲೋಕಸಭಾ ಟಿಕೆಟ್‌ ಸಿಗುತ್ತಾ ಎನ್ನುವುದು ಕೆಲ ದಿನಗಳಲ್ಲಿ ತಿಳಿಯಲಿದೆ.

Share This Article