ಮಹಿಳೆಯ ಹೊಟ್ಟೆಯಿಂದ 10 ಕೆ.ಜಿಯ ಗೆಡ್ಡೆ ಹೊರತೆಗೆದ ವೈದ್ಯರು!

Public TV
1 Min Read

ಥಾಣೆ: ಮಹಾರಾಷ್ಟ್ರದ ಥಾಣೆಯ (Thane, Maharastra) ಸಿವಿಲ್ ಆಸ್ಪತ್ರೆಯ ವೈದ್ಯರು ಅಸಾಧ್ಯವೆನಿಸಿದ ಆಪರೇಷನ್ ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ಮಹಿಳೆಯೊಬ್ಬರಿಗೆ ಹೊಸ ಜೀವನ ನೀಡಿದ ಘಟನೆಯೊಂದು ನಡೆದಿದೆ. ಮಹಿಳೆಯ ಹೊಟ್ಟೆಯಿಂದ 10 ಕೆ.ಜಿ ಗೆಡ್ಡೆಯನ್ನು (ನೀರು ತುಂಬಿದ ಮಾಂಸದ ಉಂಡೆ) ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ತೀವ್ರ ಹೊಟ್ಟೆನೋವು: ಮಹಾರಾಷ್ಟ್ರದ ಉಲ್ಲಾಸನಗರ ಪ್ರದೇಶದಲ್ಲಿ ತರಕಾರಿ ಮಾರುತ್ತಿದ್ದ 48 ವರ್ಷದ ಮಹಿಳೆಯೊಬ್ಬರು ಕಳೆದ 6 ತಿಂಗಳಿನಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆರ್ಥಿಕ ಸ್ಥಿತಿ ಚೆನ್ನಾಗಿರದ ಕಾರಣ ಅವರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಲು ಹಿಂಜರಿದಿದ್ದಾರೆ. ಹೀಗಾಗಿ ನೋವು ತಿನ್ನುತ್ತಲೇ ಜೀವನ ನಡೆಸುತ್ತಿದ್ದರು.ಕ್ರಮೇಣ ಈ ನೋವು ಹೆಚ್ಚಾಗಿ ತಡೆದುಕೊಳ್ಳಲು ಸಾಧ್ಯವಾಗದಿದ್ದಾಗ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ.

ಆಸ್ಪತ್ರೆಗೆ ದಾಖಲು: ಜನವರಿ ಮೊದಲ ವಾರದಲ್ಲಿ ಉಲ್ಲಾಸನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ದಾಖಲಾದರು. ಇಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜನವರಿ 20 ರಂದು ಥಾಣೆ ಸಿವಿಲ್ ಆಸ್ಪತ್ರೆಗೆ ಕಳುಹಿಸಿದ್ದರು. ಅದರಂತೆ ಮಹಿಳೆಯನ್ನು ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ನೀರು ತುಂಬಿದ ಮಾಂಸದ ಉಂಡೆ ಇರುವುದು ಬೆಳಕಿಗೆ ಬಂದಿದೆ.

ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೈಲಾಸ್ ಪವಾರ್ ಹಾಗೂ ಹೆಚ್ಚುವರಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಧೀರಜ್ ಮಹಾಂಗಡೆ ಅವರ ಮಾರ್ಗದರ್ಶನದಲ್ಲಿ ಸೋಮವಾರ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಈ ವೇಳೆ ಆಕೆಯ ಹೊಟ್ಟೆಯಿಂದ ಸುಮಾರು 10 ಕೆಜಿ ತೂಕದ ನೀರು ತುಂಬಿದ ಮಾಂಸದ ಗೆಡ್ಡೆಯನ್ನು ಹೊರತೆಗೆಯಲಾಯಿತು.

4 ಗಂಟೆ ನಡೆದ ಶಸ್ತ್ರಚಿಕಿತ್ಸೆ: ಮಹಿಳೆಯ ಗರ್ಭಾಶಯದದಲ್ಲಿ ನೀರಿನಿಂದ ತುಂಬಿದ ಗೆಡ್ಡೆಯಿರುವುದು (Meat filled with water 10 kg) ಬಯಲಾಯಿತು. ಶಸ್ತ್ರಚಿಕಿತ್ಸೆ ಸಾಕಷ್ಟು ಕಷ್ಟಕರವಾಗಿತ್ತು. ಆದರೆ ಆಸ್ಪತ್ರೆಯ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು. ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಗೆಡ್ಡೆಯನ್ನು ಹೊರತೆಗೆದರು. ಸ್ತ್ರೀರೋಗ ತಜ್ಞೆ ಡಾ.ಶ್ರೇಯಾ ಶೆಲ್ಕೆ, ಅರಿವಳಿಕೆ ತಜ್ಞೆ ಪ್ರಿಯಾಂಕಾ ಮಹಾಂಗಡೆ ಹಾಗೂ ಇತರ ಸಿಬ್ಬಂದಿ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಶ್ರಮಿಸಿದರು.

Share This Article