ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ – ಮೇಳೈಸಿದ ಸಾಂಸ್ಕೃತಿಕ ವೈಭವ, ಸೇನಾ ಶಕ್ತಿಪ್ರದರ್ಶನವೇ ರೋಚಕ!

By
3 Min Read

ನವದೆಹಲಿ: ಭಾರತದಲ್ಲಿ 75ನೇ ವರ್ಷದ ಗಣರಾಜ್ಯೋತ್ಸವವನ್ನು (Republic Day) ಆಚರಿಸಲಾಗುತ್ತಿದೆ. ಭಾರತದಲ್ಲಿ ಸಂವಿಧಾನ ಅಳವಡಿಸಿಕೊಂಡ ದಿನವನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. 75ನೇ ವರ್ಷದ ಆಚರಣೆಯನ್ನು ಮಹಿಳಾ ಕೇಂದ್ರಿತವಾಗಿ ರೂಪಿಸಲಾಗಿದ್ದು, ಈ ಬಾರಿಯ ಆಚರಣೆಯೂ ಹಲವು ವಿಶೇಷತೆಗಳಿಂದ ಕೂಡಿದೆ.

ನಾರಿ ಶಕ್ತಿಯೇ (Nari Shakti) ಮೇಲುಗೈ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು. ʻಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣʼ ವಸ್ತು ವಿಷಯ ಅಡಿಯಲ್ಲಿ 194 ಮಹಿಳಾ ಪೊಲೀಸರು ಪರೇಡ್ ನಡೆಸಿಕೊಟ್ಟರು. ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನು ಮುನ್ನಡೆಸಿದರು. ಇದರೊಂದಿಗೆ 148 NCC ಬಾಲಕಿಯರು, 100 ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸಿ ದೇಶದ ಸಾಂಸ್ಕೃತಿಕತೆಯನ್ನು ಕಣ್ಣಿಗೆ ಕಟ್ಟಿಕೊಡುವಂತೆ ಮಾಡಿದರು. ಇನ್ನೂ ಆತ್ಮನಿರ್ಭರ್‌ ಪರಿಕಲ್ಪನೆಯಲ್ಲಿ ಮೂಡಿಬಂದ ಸ್ತಬ್ಧಚಿತ್ರ ʻನಾರಿ ಶಕ್ತಿʼಗೆ ಹೆಸರುವಾಸಿಯಾಗಿತ್ತು. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಹಾಗೂ ಅಂತರಿಕ್ಷದಲ್ಲಿ ಮಹಿಳೆಯರ ಸಾಧನೆಗಳನ್ನು ತೋರಿಸಲಾಯಿತು. ಜೊತೆಗೆ ʻವಂದೇ ಭಾರತ್‌ʼ ನಾರಿಶಕ್ತಿ ತಂಡದ 1,500 ಮಹಿಳೆಯರು ಏಕಕಾಲಕ್ಕೆ ನೃತ್ಯಪ್ರದರ್ಶಿಸಿದರು.

ನಂತರ 262 ಫೀಲ್ಡ್ ರೆಜಿಮೆಂಟ್‌ನ ಲೆಫ್ಟಿನೆಂಟ್ ಪ್ರಿಯಾಂಕಾ ಸೆವ್ದಾ ನೇತೃತ್ವದಲ್ಲಿ 1890 ರಾಕೆಟ್ ರೆಜಿಮೆಂಟ್‌ನಿಂದ ಫಿರಂಗಿ ರೆಜಿಮೆಂಟ್‌ನ ಪಿನಾಕಾ ತುಕಡಿ ಹಾಗೂ ಜೊತೆಗೆ 42 ಶಸ್ತ್ರಸಜ್ಜಿತ ರೆಜಿಮೆಂಟ್‌ನ ಲೆಫ್ಟಿನೆಂಟ್ ಫಯಾಜ್ ಸಿಂಗ್ ಧಿಲ್ಲೋನ್ ನೇತೃತ್ವದ ಟ್ಯಾಂಕ್ T-90 ಭೀಷ್ಮಾದ ತುಕಡಿ ಆಕರ್ಷಕ ಪಥಸಂಚಲನ ನಡೆಸಿಕೊಟ್ಟಿತು. ಇದನ್ನೂ ಓದಿ: 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ: ಮ್ಯಾಕ್ರನ್

ವಿಶೇಷತೆಗಳೇನು?
ಆಕರ್ಷಕ ಪಥಸಂಚಲನದಲ್ಲಿ ಭಾರತೀಯ ಸೇನಾಪಡೆಯ ಮೂರು ದಳಗಳ ಶಕ್ತಿ ಸಾಮರ್ಥ್ಯ ಪ್ರದರ್ಶಿಸುವ ಕೆಲಸ ನಡೆಯಿತು. ಪಥ ಸಂಚಲನದಲ್ಲಿ ಪಿನಾಕಾ ರಾಕೆಟ್‌ ಲಾಂಚರ್‌, ಸ್ವಾತಿ – ಶಸ್ತ್ರಾಸ್ತ್ರ ಪತ್ತೆಹಚ್ಚುವ ರಾಡರ್‌ ಸಿಸ್ಟಮ್‌, ಸರ್ವತ್ರ ಮೊಬೈಲ್‌ ಬ್ರಿಡ್ಜಿಂಗ್‌ ಸಿಸ್ಟಮ್‌, ಡ್ರೋನ್‌ ಜಾಮರ್‌ ಸಿಸ್ಟಮ್‌, ಪ್ರಚಂಡ, ರುದ್ರ‌ ಹೆಲಿಕಾಪ್ಟರ್‌, ಸ್ವದೇಶಿ ನಿರ್ಮಿತ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನ, ಸಿಆರ್‌ಪಿಎಫ್‌ ಬ್ಯಾಂಡ್‌ ಪಥಸಂಚಲನ, ಬಿಎಸ್‌ಎಫ್‌ ಒಂಟೆ ರೆಜಿಮೆಂಟ್‌ ಪರೇಡ್‌ ನಡೆಸಿಕೊಡಲಾಯಿತು. ಜೊತೆಗೆ ಭಾರತೀಯ ವಾಯುಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಪರೇಡ್‌ನಲ್ಲಿ ಸೇನಾ ಸಾಮರ್ಥ್ಯ ಪ್ರದರ್ಶಿಸಿ ಗಮನ ಸೆಳೆದವು.

ಸ್ತಬ್ಧ ಚಿತ್ರಗಳ ಪ್ರದರ್ಶನ:
16 ರಾಜ್ಯಗಳು ಮತ್ತು ವಿವಿಧ ಸಚಿವಾಲಯಗಳು ಮತ್ತು ಸಂಸ್ಥೆಗಳು ತಯಾರಿಸಿರುವ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು. ಇದರೊಂದಿಗೆ ವಿವಿಧ ರಾಜ್ಯಗಳ ಜಾನಪದ ಕಲಾತಂಡಗಳು ಜಾನಪದ ನೃತ್ಯವನ್ನು ಪ್ರದರ್ಶನ ನಡೆಸಿಕೊಟ್ಟವು. ಇದನ್ನೂ ಓದಿ: Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ

Share This Article