ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರ – ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ

Public TV
2 Min Read

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ (Scheduled caste) ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕು ಅದಕ್ಕೆ ಸಂವಿಧಾನದ ಆರ್ಟಿಕಲ್ 341 ತಿದ್ದುಪಡಿ ತಂದು ಖಂಡ (3) ಕ್ಕೆ ಸೇರಿಸಿ ಒಳ ಮೀಸಲಾತಿ ಘೋಷಣೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ (Central Government) ಶಿಫಾರಸು ಮಾಡಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ತೀರ್ಮಾನ ಕೈ ಗೊಳ್ಳಲಾಗಿದೆ.

ಹೊಸ ಜನಗಣತಿ ಪ್ರಕಾರ, ಮೀಸಲಾತಿ ಪರಿಷ್ಕರಣೆ ಮಾಡಲು ಕೆಂದ್ರಕ್ಕೆ ಶಿಫಾರಸು ಮಾಡಲು ಇಂದಿನ ಸಂಪುಟ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಮೀಸಲಾತಿ ಪರಿಷ್ಕರಣೆ ಮಾಡಲು ಸಂವಿಧಾನ ಬದ್ಧವಾಗಿ ರಾಜ್ಯಗಳಿಗೆ ಅಧಿಕಾರ ಕೊಡಲು ಕೇಂದ್ರಕ್ಕೆ ಮನವಿ ಮಾಡಲು ಸಹಾ ಇಂದಿನ ಸಭೆಯಲ್ಲಿ ತಿರ್ಮಾನಿಸಲಾಗಿದೆ. ಆ ಮೂಲಕ ಸದಾಶಿವ ಆಯೋಗದ ವರದಿ ಅನ್ವಯ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂಬ ಭರವಸೆ ನೀಡಿದ್ದ ಕಾಂಗ್ರೆಸ್ ಈಗ ಒಳ ಮೀಸಲಾತಿ ಜಾರಿ ಹೊಣೆಯನ್ನ ಕೇಂದ್ರ ಸರ್ಕಾರದ ಹೆಗಲಿಗೆ ರವಾನಿಸಿ ಒಳ ಮೀಸಲಾತಿ ಶಿಫಾರಸು ಮಾಡಿದೆ.

ಸಂವಿಧಾನದ ಆರ್ಟಿಕಲ್ 341 ಕ್ಕೆ ಖಂಡ (3) ನ್ನು ಸೇರಿಸದೇ ಹೋದರೆ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯದ ಶಿಫಾರಸ್ಸಿನಂತೆ ಈಗಿನ ಜನಸಂಖ್ಯೆಗೆ ಅನಿಗುಣವಾಗಿ ತಿದ್ದುಪಡಿ ಮಾಡಿ ಒಳ ಮೀಸಲಾತಿ ಘೋಷಣೆ ಮಾಡಬೇಕು ಎಂದು ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.

ಏನಿದು ಒಳ‌ ಮೀಸಲಾತಿ ಶಿಫಾರಸು..?:
* ಪರಿಶಿಷ್ಟ ಜಾತಿಯಲ್ಲೆ ಕೆಲವು ಸಣ್ಣಪುಟ್ಟ ಸಮುದಾಯಗಳು ಮೀಸಲಾತಿಯಿಂದ ವಂಚಿತವಾಗಿದ್ದು ಅವರಿಗೆ ಇರುವ ಮೀಸಲಾತಿಯಲ್ಲೇ ಹೆಚ್ಚು ಅವಕಾಶ ನೀಡುವ ಒಳ ಮೀಸಲಾತಿ ಜಾರಿಗೆ ಮುಂದಾಗಿರುವುದು.
* ಎಸ್.ಎಂ.ಕೃಷ್ಣ ಅವದಿಯಲ್ಲಿ ನ್ಯಾ.ಮೂರ್ತಿ ಸದಾಶಿವ ಆಯೋಗ ರಚನೆ ಮಾಡಿ ಒಳ ಮೀಸಲಾತಿ ಹೇಗೆ ಜಾರಿ ಮಾಡಬೇಕು ಎಂಬ ವರದಿ ನೀಡಲು ಸೂಚನೆ.
* ಹಿಂದಿನ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮೀಸಲು ಪ್ರಮಾಣ 15 ರಿಂದ 17 ಕ್ಕೆ ಹೆಚ್ಚಳ ಮಾಡಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದ ಬಸವರಾಜ್ ಬೊಮ್ಮಾಯಿ (Basavaraj Bommai) ಸರ್ಕಾರ.

* ಸದಾಶಿವ ಆಯೋಗ ವರದಿ ಮುಕ್ತಾಯ ಎಂದು ತೀರ್ಮಾನಿಸಿದ್ದ ಬಸವರಾಜ ಬೊಮ್ಮಾಯಿ ಸಂಪುಟ. ಆದ್ದರಿಂದ ಒಂದು ಸರ್ಕಾರ ಆಯೋಗದ ವರದಿ ಮುಕ್ತಾಯ ಎಂದ ಮೇಲೆ ಅದೇ ವರದಿಯನ್ನು ಇನ್ನೊಂದು ಸರ್ಕಾರ ಮುಂದುವರಿಸಲು ಬರಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿ ಮಾಡಿ ಒಳ ಮೀಸಲಾತಿ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್.
* ಸದಾಶಿವ ಆಯೋಗ ವರದಿ ಮುಕ್ತಾಯ ಎಂದು ಬಸವರಾಜ್ ಬೊಮ್ಮಾಯಿ ಸಂಪುಟ ತೀರ್ಮಾನ ಮಾಡಿದ ಕಾರಣ ಇದು ಒಳ‌‌ ಮೀಸಲಾತಿಗಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಡುವ ಪ್ರತ್ಯೇಕ ಶಿಫಾರಸ್ಸು ಆಗಲಿದೆ. ಆದ್ದರಿಂದ ಸದಾಶಿವ ಆಯೋಗದ ವರದಿಯಲ್ಲದ ರಾಜ್ಯ ಸರ್ಕಾರದಿಂದ‌ ಮಾಡಿರುವ ಹೊಸ ಶಿಫಾರಸು ಇದಾಗಲಿದೆ.
* ಈ ಶಿಫಾರಸ್ಸಿನಲ್ಲಿ ಒಳ ಮೀಸಲಾತಿಗಾಗಿ ಸಂವಿಧಾನದ 341/3 ಕ್ಕೆ ತಿದ್ದುಪಡಿ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟ ಸಭೆ ನಿರ್ಣಯ.

Share This Article