ಸಚಿನ್‌ ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿ 4 ಮಕ್ಕಳ ತಾಯಿ ಸೀಮಾ ಹೈದರ್

By
2 Min Read

ನೋಯ್ಡಾ: ಭಾರತದ ಪ್ರಿಯತಮ ಸಚಿನ್‌ ಮೀನಾಗೋಸ್ಕರ (Sachin Meena), ಪಾಕಿಸ್ತಾನದಿಂದ (Pakistan) ಅಕ್ರಮವಾಗಿ ಬಂದಿರುವ ನಾಲ್ಕು ಮಕ್ಕಳ ತಾಯಿ ಸೀಮಾ ಹೈದರ್ (Seema Haider) ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಳೆ.

ಸಚಿನ್‌ ಹಾಗೂ ಸೀಮಾ ದಂಪತಿ ಸದ್ಯ ಗ್ರೇಟರ್‌ ನೊಯ್ಡಾದಲ್ಲಿ ವಾಸವಾಗಿದ್ದಾರೆ. ಇದೀಗ ಇವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ಸ್ವತಃ ಸೀಮಾ ಹೈದರ್‌ ಬಹಿರಂಗಪಡಿಸಿದ್ದಾಳೆ. ಶೀಘ್ರವೇ ನಾನು ತಾಯಿಯಾಗಲಿದ್ದೇನೆ. ಈ ಮೂಲಕ 2024 ರಲ್ಲಿ ಹೊಸ ಸುದ್ದಿಯನ್ನು ಕೊಡಲಿರುವುದಾಗಿ ತಿಳಿಸಿದ್ದಾಳೆ. ಇನ್ನು ಸಚಿನ್ ತಂದೆ ನನ್ನ ಕೈ ನೋಡಿದ್ದು, ಗಂಡು ಮಗುವಿಗೆ ಜನ್ಮ ನೀಡುವುದಾಗಿ ಭವಿಷ್ಯ ನುಡಿದಿದ್ದಾರೆ ಅಂತಾನೂ ಹೇಳಿದ್ದಾಳೆ.

ಸಚಿನ್‌ ಹುಟ್ಟುಹಬ್ಬ ಕೂಡ ಹತ್ತಿರವಾಗುತ್ತಿದ್ದು, ಕುಟುಂಬಕ್ಕೆ ಹೊಸ ಸದಸ್ಯರು ಬಂದರೆ ಸಂತಸ ಇಮ್ಮಡಿಗೊಳ್ಳುತ್ತದೆ ಎಂದಿದ್ದಾಳೆ. ಇದೇ ವೇಳೆ ಮಾಧ್ಯಮದವರು ಡೆಲಿವರಿ ಯಾವಾಗ ಎಂದು ಕೇಳಿದಾಗ, ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ ಎಂದು ಸೀಮಾ ಹೇಳಿದ್ದಾಳೆ. ಇದನ್ನೂ ಓದಿ: ಇಂಡಿಯಾ- ಪಾಕ್ ಗಡಿ ಸೀಮಾ ಹೈದರ್, ಉದ್ದ 5 ಅಡಿ 6 ಇಂಚು- ಉತ್ತರ ಪತ್ರಿಕೆ ಫುಲ್ ವೈರಲ್

2019ರಲ್ಲಿ ಆನ್‌ಲೈನ್‌ ಗೇಮ್‌ PUBG ಮೂಲಕ ಸೀಮಾ ಹೈದರ್‌ ಹಾಗೂ ಸಚಿನ್‌ ನಡುವೆ ಸ್ನೇಹ ಬೆಳೆದಿದೆ. ಈ ಸ್ನೇಹ ಪ್ರೀತಿಗೆ ತಿರುಗಿದ್ದು, 2023ರ ಮೇ ತಿಂಗಳಲ್ಲಿ ಸೀಮಾ ತನ್ನ ಪ್ರಿಯತಮ ಸಚಿನ್‌ ನನ್ನು ಹುಡುಕಿಕೊಂಡು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾಳೆ. ಭಾರತಕ್ಕೂ ಬರುವ ಮುನ್ನ ಸೀಮಾ ಹಾಗೂ ಸಚಿನ್‌ ನೇಪಾಳದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ.

ಸೀಮಾ ಮತ್ತು ಸಚಿನ್ ಅವರನ್ನು ಪಾಕಿಸ್ತಾನಿ ಗೂಢಚಾರಿಕೆ ಎಂದು ಶಂಕಿಸಿ ಉತ್ತರ ಪ್ರದೇಶ ಪೊಲೀಸರು ಕಳೆದ ವರ್ಷ ಜುಲೈನಲ್ಲಿ ಬಂಧಿಸಿದ್ದರು. ಬಳಿಕ ಕೆಲವೊಂದಷ್ಟು ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಯಿತು. ಇದಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕ್ಷಮಾದಾನ ಮನವಿಯನ್ನು ಸಲ್ಲಿಸಿದ್ದಳು. ಅದರಲ್ಲಿ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ತನ್ನ ಮಕ್ಕಳೊಂದಿಗೆ ವಾಸಿಸಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಳು.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಿವಾಸಿ ಸೀಮಾ, ಪಾಕ್‌ ಪ್ರಜೆ ಗುಲಾಮ್ ಹೈದರ್ ನನ್ನು ವಿವಾಹವಾಗಿದ್ದಳು. 2019 ರವರೆಗೆ ಕರಾಚಿಯಲ್ಲಿ ವಾಸವಾಗಿದ್ದ ದಂಪತಿ ಬಳಿಕ ಪತಿ ಗುಲಾಮ್ ಕೆಲಸದ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದಾನೆ. ಈ ದಂಪತಿಗೆ ನಾಲ್ಕು ಜನ ಮಕ್ಕಳಿದ್ದು, ಮೊದಲ ಮಗುವಿನ ವಯಸ್ಸು 8 ವರ್ಷವಾಗಿದೆ. ಇದೀಗ ಸೀಮಾ ಮತ್ತೆ ತನ್ನ ಪ್ರಿಯಕರ ಸಚಿನ್‌ ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾಳೆ.

Share This Article