ರಾಮ ವಿಗ್ರಹ ಇಂದು ಆಯ್ಕೆ: ಕರ್ನಾಟಕದ ಕಲಾವಿದರ ಕೈಚಳಕ ಗೆಲ್ಲುತ್ತಾ ಮನ..?

Public TV
1 Min Read

ಅಯೋಧ್ಯೆ: ನೂತನವಾಗಿ ನಿರ್ಮಾಣವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ಮೂರ್ತಿ ಯಾವುದು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಈಗಾಗಲೇ 3 ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದ್ದು, ಇಂದು ಮತದಾನ ಪ್ರಕ್ರಿಯೆ ಮೂಲಕ ಆಯ್ಕೆ ನಡೆಯಲಿದೆ. ಇದರಲ್ಲಿ ಬಹುಮತ ಸಿಗುವ ಮೂರ್ತಿ ಮಂದಿರದ ಗರ್ಭಗುಡಿ ಸೇರಲಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯರು ಅತ್ಯುತ್ತಮ ಮೂರ್ತಿಯನ್ನು ಆಯ್ಕೆ ಮಾಡಲಿದ್ದಾರೆ.

ಕರ್ನಾಟಕದ ಇಬ್ಬರು, ರಾಜಸ್ಥಾನದ ಒಬ್ಬರು!: ಶ್ರೀರಾಮನ ಮೂರ್ತಿಯ ಕೆತ್ತನೆಯ ಜವಾಬ್ದಾರಿಯನ್ನು ಮೂವರಿಗೆ ವಹಿಸಲಾಗಿತ್ತು. ಇವರಲ್ಲಿ ಇಬ್ಬರು ಶಿಲ್ಪಿಗಳು ಕರ್ನಾಟಕದವರು, ಇನ್ನೊಬ್ಬರು ರಾಜಸ್ಥಾನದವರು. ಮೈಸೂರಿನ ಅರುಣ್‌ ಯೋಗಿರಾಜ್‌, ಬೆಂಗಳೂರಿನ ಜಿ.ಎಲ್‌ ಭಟ್‌ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ಈಗಾಗಲೇ ಮೂರ್ತಿ ಕೆತ್ತನೆ ಕಾರ್ಯ ಮುಗಿಸಿದ್ದಾರೆ. ಈ ಮೂರು ಮೂರ್ತಿಗಳಲ್ಲಿ ಅತ್ಯುತ್ತಮ ವಿನ್ಯಾಸ ಎಂದು ಟ್ರಸ್ಟ್‌ ಸದಸ್ಯರು ಪರಿಗಣಿಸುವ ಒಂದು ಮೂರ್ತಿ ರಾಮಮಂದಿರದ ಗರ್ಭಗುಡಿಯಲ್ಲಿ ಜನವರಿ 22ರಂದು ಪ್ರತಿಷ್ಠಾಪನೆಯಾಗಲಿದೆ. ಇನ್ನುಳಿದ ಎರಡು ಮೂರ್ತಿಯನ್ನು ರಾಮ ದೇಗುಲದ ಆವರಣದಲ್ಲಿಯೇ ಇಡುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹೇಳಿದೆ. ಬಿಲ್ಲು ಬಾಣ ಹಿಡಿದಿರುವ ರಾಮನ ಮೂರ್ತಿ ಕೆತ್ತನೆಗೆ 6 ತಿಂಗಳು ಬೇಕಾಯಿತು ಎಂದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಹೇಳಿದ್ದಾರೆ.

5 ವರ್ಷದ ಬಾಲ ರಾಮನ ವಿಗ್ರಹ: 5 ವರ್ಷದ ಬಾಲರಾಮನ ಮುಗ್ಧತೆಯನ್ನು ಬಿಂಬಿಸುವ ವಿಗ್ರಹವನ್ನು ನಿರ್ಮಾಣ ಮಾಡಲು ಹೇಳಿದ್ದೆವು. 51 ಇಂಚು ಎತ್ತರದ ವಿಗ್ರಹದಲ್ಲಿ ದೈವಿಕತೆ ಹಾಗೂ ಮಗುವಿನಂತಹ ಮುಗ್ಧತೆ ಇರುವ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದರು. ಇದನ್ನೂ ಓದಿ: ಅಯೋಧ್ಯೆಯ ಬಾಲ ರಾಮನ ಮೂರ್ತಿಗೆ ಬಳಸಿದ್ದು ಮೈಸೂರಿನ ಕೃಷ್ಣ ಶಿಲೆ

ದೇವಾಲಯದ ನಿರ್ಮಾಣ, ಸಿದ್ಧತೆ ಪರಿಶೀಲನೆ : ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮಜನ್ಮಭೂಮಿ ಪಥ ಹಾಗೂ ದೇಗುಲ ಸಂಕೀರ್ಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಂಪೂರ್ಣ ಪರಿಶೀಲನೆ ನಡೆಸಿದರು.

Share This Article