Ayodhya Ram Mandir: ನೂತನ ವಿಮಾನ ನಿಲ್ದಾಣಕ್ಕೆ ʼಮಹರ್ಷಿ ವಾಲ್ಮೀಕಿʼ ಹೆಸರಿಡಲು ನಿರ್ಧಾರ

Public TV
1 Min Read

ಲಕ್ನೋ: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ (Ayodhya Ram Mandir) ರಾಮಮಂದಿರ ಉದ್ಘಾಟನೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಅಂತೆಯೇ ಸದ್ಯ ಅಯೋಧ್ಯೆಗೆ ತೆರಳುವ ನೂತನ ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳ ಉದ್ಘಾಟನೆ ಕೂಡ ನಡೆಯಲಿದೆ. ಸದ್ಯ ವಿಮಾನ ನಿಲ್ಧಾಣಕ್ಕೆ ʼಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮ್ʼ ಎಂದು ಹೆಸರಿಡಲು ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ಅಂದರೆ ಡಿಸೆಂಬರ್‌ 30ರಂದು ಪ್ರಧಾನಿ ನರೇಂದ್ರ ಮೋದಿಯವರು ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಹಿಂದೆ ವಿಮಾನ ನಿಲ್ದಾಣಕ್ಕೆ ʼಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯೆʼ ಎಂದು ಹೆಸರಿಡುವುದಾಗಿ ತೀರ್ಮಾನ ಮಾಡಲಾಗಿತ್ತು. ಆದರೆ ಇದೀಗ ʼಮಹರ್ಷಿ ವಾಲ್ಮೀಕಿʼ ಎಂದು ನಾಮಕರಣ ಮಾಡುವ ಸಾಧ್ಯತೆಗಳು ಇರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 1,425 ಕಿಲೋಮೀಟರ್‌ ಕಾಲ್ನಡಿಗೆಯಲ್ಲೇ ಹೊರಟ ಮುಸ್ಲಿಂ ಮಹಿಳೆ

ಉದ್ಘಾಟನೆಯ ದಿನದಂದು ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಮೊದಲ ವಿಮಾನಗಳು ಕಾರ್ಯನಿರ್ವಹಿಸಲಿವೆ. ಎರಡು ವಿಮಾನಯಾನ ಸಂಸ್ಥೆಗಳು ಕೂಡ ಈಗಾಗಲೇ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ನಿಂದ ಅಯೋಧ್ಯೆಗೆ ವಿಮಾನಗಳನ್ನು ಘೋಷಿಸಿದ್ದು, ಜನವರಿ 2024 ರಲ್ಲಿ ಹಾರಾಟ ಪ್ರಾರಂಭವಾಗುತ್ತದೆ. ಇದನ್ನೂ ಓದಿ: Ayodhya Ram Mandir: ಅಹಮದಾಬಾದ್‌ ಗ್ರೂಪ್‌ನಿಂದ ಅಯೋಧ್ಯೆಗೆ 450 ಕೆ.ಜಿ ತೂಕದ ಮೆಗಾ ಡ್ರಮ್ ಗಿಫ್ಟ್‌

ವಿಮಾನ ನಿಲ್ದಾಣದ ಮೊದಲ ಹಂತದ ನಿರ್ಮಾಣಕ್ಕೆ ಅಂದಾಜು 1,450 ಕೋಟಿ ರೂ. ವೆಚ್ಚವಾಗಿದೆ. ಸುಮಾರು 6,500 ಚದರ ಮೀಟರ್‌ಗಳಷ್ಟು ವಿಸ್ತಾರವಾಗಿರುವ ಹೊಸ ಟರ್ಮಿನಲ್ ಕಟ್ಟಡವು ಪೀಕ್ ಅವರ್ನಲ್ಲಿ 600 ಮಂದಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವಂತೆ ನಿರ್ಮಾಣ ಮಾಡಲಾಗಿದೆ. ಇನ್ನು ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಎರಡನೇ ಹಂತದ ಅಭಿವೃದ್ಧಿಯಲ್ಲಿ 50,000 ಚದರ ಮೀಟರ್‌ನ ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಲಾಗುವುದು. ಪೀಕ್ ಅವರ್‌ಗಳಲ್ಲಿ 3 ಸಾವಿರ ಮಂದಿ ಪ್ರಯಾಣಿಕರು ಹಾಗೂ ವಾರ್ಷಿಕ 60 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

Share This Article