ರಾಮನಗರದಲ್ಲಿ ಒಂದೇ ಗ್ರಾಮದ ಇಬ್ಬರಿಗೆ ಕೊರೊನಾ – ತುಮಕೂರಿನಲ್ಲಿ ಹೃದಯಸಂಬಂಧಿ ಕಾಯಿಲೆ ಪೀಡಿತರಿಗೆ ಸೋಂಕು

Public TV
2 Min Read

ಬೆಂಗಳೂರು/ರಾಮನಗರ: ರಾಜ್ಯದಲ್ಲಿ ಕೊರೊನಾ (Corona Virus) ಆತಂಕ ಹೆಚ್ಚಾಗಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿರೋದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಮತ್ತೊಂದೆಡೆ ರಾಮನಗರದಲ್ಲಿ (Ramanagara) ಒಂದೇ ಗ್ರಾಮದ ಇಬ್ಬರಿಗೆ ಕೊರೊನಾ ಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಕೇರಳ ಹಾಗೂ ತಮಿಳುನಾಡಿನಲ್ಲಿ (TamilNadu_=) ಕೊರೊನಾ ರೂಪಾಂತರ ತಳಿ JN.1 ಪತ್ತೆಯಾಗಿರುವ ಹಿನ್ನೆಲೆ ಸರ್ಕಾರ ರಾಜ್ಯದಲ್ಲಿ ಹದ್ದಿನ ಕಣ್ಣಿಟ್ಟಿದೆ. ಸರ್ಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಜೆಎನ್.1 ಎದುರಿಸಲು ಸನ್ನದ್ಧವಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ (Government And Private Hospitals) ಮಾಹಿತಿ ಪಡೆಯಲಾಗಿದೆ. ಜೊತೆಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲ್ಯಾಂಟ್‌, ವೆಂಟಿಲೇಟರ್‌ಗಳು ಹಾಗೂ ಹಾಸಿಗಳ ವ್ಯವಸ್ತೆ ನೋಡಿಕೊಳ್ಳುವಂತೆ ಸೂಚನೆ ನೀಡಿದೆ.

ಒಂದೇ ಗ್ರಾಮದ ಇಬ್ಬರಿಗೆ ಸೋಂಕು:
ರಾಮನಗರದಲ್ಲಿಯೂ ಕೊರೊನಾ ಕೇಸ್ ಹೆಚ್ಚಾಗ್ತಿದೆ. ಕಳೆದ ಎರಡು ದಿನಗಳಲ್ಲಿ ಮೂರು ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಅದರಲ್ಲೂ ಒಂದೇ ಗ್ರಾಮದ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ರಾಮನಗರ ತಾಲೂಕಿನ ಬೈರಮಂಗಲ ಗ್ರಾಮದ ಎಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ಗೃಹಿಣಿಗೆ ಪಾಸಿಟಿವ್ ಬಂದಿದೆ. ಅಲ್ಲದೇ ಕೆಂಗೇರಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಬಿಡದಿ ಗ್ರಾಮದ ಓರ್ವ ವ್ಯಕ್ತಿಗೂ ಕೋವಿಡ್ ಧೃಡಪಟ್ಟಿದೆ. ಆದ್ರೆ ಈ ಮೂವರಿಗೆ ಸಂಬಂಧಿಸಿದ ಟ್ರಾವೆಲ್ ಹಿಸ್ಟರಿ ಇಲ್ಲವೆಂದು ಆರೋಗ್ಯ ಇಲಾಖೆ ಖಚಿತ ಪಡೆಸಿದೆ. ಮೂವರ ಕುಟುಂಬಸ್ಥರನ್ನೂ ಕೋವಿಡ್ ಟೆಸ್ಟ್‌ಗೆ ಒಳಪಡಿಸಿ ಕ್ವಾರಂಟೈನ್ ಮಾಡಿದ್ದು, ಜೆಎನ್.1 ಸೋಂಕು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 15 ಹಾಸಿಗೆಗಳ ಎರಡು ಕೋವಿಡ್ ವಾರ್ಡ್, 500 ಲೀ. ಸಾಮರ್ಥ್ಯದ ಎರಡು ಆಕ್ಸಿಜನ್ ಪ್ಲ್ಯಾಂಟ್‌ಗಳು ಕಾರ್ಯಾರಂಭ ಮಾಡಿವೆ. 4 ವೆಂಟಿಲೇಟರ್ ಹಾಗೂ 19 ಐಸಿಯು ಹಾಸಿಗಳನ್ನ ಕಾಯ್ದಿರಿಸಲಾಗಿದೆ.

ತುಮಕೂರಿನಲ್ಲೂ ಇಬ್ಬರಿಗೆ ಕೋವಿಡ್:
ತುಮಕೂರು ಜಿಲ್ಲೆಯ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಇಬ್ಬರೂ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಹೋದಾಗ ಕೋವಿಡ್ ಪತ್ತೆಯಾಗಿದೆ. ಮಧುಗಿರಿ ಪಟ್ಟಣದ 45 ವರ್ಷ ಪುರುಷ ಹಾಗೂ ತುಮಕೂರು ನಗರದ 65 ವರ್ಷದ ಮಹಿಳೆಗೆ ಕೋವಿಡ್ ಪತ್ತೆಯಾಗಿದೆ. ಇಬ್ಬರೂ ಹೃದಯ ಸಂಬಂಧಿ ಕಾಯಿಲೆ ತಪಾಸಣೆಗೆ ಹೋದಾಗ ಕೋವಿಡ್ ದೃಢಪಟ್ಟಿರುವುದು ಗೊತ್ತಾಗಿದೆ. ಇಬ್ಬರಲ್ಲೂ ರೋಗ ಲಕ್ಷಣಗಳು ಕಂಡುಬಂದಿಲ್ಲ. ಮಧುಗಿರಿ ಮೂಲದ ವ್ಯಕ್ತಿ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತ ಎರಡೂ ಕುಟುಂಬದ ಸದಸ್ಯರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ಬಂದಿದೆ.

ತುಮಕೂರು ಜಿಲ್ಲಾಡಳಿತ ಸಹ ಕೊರೊನಾ ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 2,300 ಬೆಡ್‌ಗಳಿದ್ದು ಅದರಲ್ಲಿ 400 ಬೆಡ್‌ಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಜಿಲ್ಲಾಸ್ಪತ್ರೆಯ 500 ಬೆಡ್‌ಗೂ ಆಕ್ಸಿಜನ್ ಸಂಪರ್ಕ ಕಲ್ಪಿಸಲಾಗಿದೆ. ಅದೇ ರೀತಿ 140 ಐಸಿಯು ಬೆಡ್ ಇದ್ದು 40 ಐಸಿಯು ಬೆಡ್‌ನ್ನು ಕೋವಿಡ್‌ಗೆ ಮೀಸಲಿಡಲಾಗಿದೆ.

Share This Article