20 ವರ್ಷದಿಂದ ನಾನೂ ಅವಮಾನಗಳನ್ನು ಎದುರಿಸಿದ್ದೇನೆ: ಧನ್ಕರ್‌ಗೆ ಕರೆ ಮಾಡಿ ಕಹಿ ಅನುಭವ ಹಂಚಿಕೊಂಡ ಮೋದಿ

By
2 Min Read

ನವದೆಹಲಿ: ತೃಣಮೂಲ ಸಂಸದರೊಬ್ಬರು ಸಂಸತ್ತಿನ (Parliment) ಆವರಣದಲ್ಲಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ (Jagdeep Dhankhar) ಅವರನ್ನು ಅವಮಾನ ಮಾಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ತಮಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾಗಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (Jagdeep Dhankhar) ಬುಧವಾರ ತಿಳಿಸಿದ್ದಾರೆ.

ಈ ವಿಚಾರವನ್ನು ಧನ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ದೂರವಾಣಿ ಕರೆ ಮಾಡಿದ್ದರು. ನಿನ್ನೆ ಸಂಸತ್ತಿನ ಸಂಕೀರ್ಣದಲ್ಲಿ ಕೆಲವು ಸಂಸದರು ಹೀನಾಯವಾಗಿ ನಡೆದುಕೊಡ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದರು ಮತ್ತು ತಮ್ಮ ಜೀವನದಲ್ಲೂ ಆದ ಕಹಿ ಅನುಭವಗಳನ್ನು ಹಂಚಿಕೊಂಡರು ಎಂದು ಧನ್ಕರ್ ತಿಳಿಸಿದ್ದಾರೆ.

ತಾನೂ ಕೂಡಾ ಕಳೆದ 20 ವರ್ಷಗಳಿಂದ ಇಂತಹ ಅವಮಾನಗಳನ್ನು ಎದುರಿಸುತ್ತಿದ್ದೇನೆ. ಆದರೆ ಭಾರತದ ಉಪರಾಷ್ಟ್ರಪತಿಯಂತಹ ಸಾಂವಿಧಾನಿಕ ಕಚೇರಿಗೆ ಅದರಲ್ಲೂ ಸಂಸತ್ತಿನ ಆವರಣದಲ್ಲಿ ಅವಮಾನ ಮಾಡಿರುವುದು ದುರದೃಷ್ಟಕರ ಎಂದು ಮೋದಿ ಹೇಳಿರುವುದಾಗಿ ಧನ್ಕರ್ ಬರೆದಿದ್ದಾರೆ.

ನನ್ನನ್ನು ಕರ್ತವ್ಯ ಪಾಲನೆ ಮತ್ತು ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುವ ನನ್ನ ಬದ್ಧತೆಯನ್ನು ಈ ರೀತಿಯ ವರ್ತನೆಗಳಿಂದ ತಡೆಯಲಾಗುವುದಿಲ್ಲ. ನಾನು ನನ್ನ ಹೃದಯಾಳದಿಂದ ಆ ಮೌಲ್ಯಗಳಿಗೆ ಬದ್ಧನಾಗಿದ್ದೇನೆ. ಯಾವುದೇ ಅವಮಾನಗಳಿಂದ ನನ್ನ ಹಾದಿ ಬದಲಾಗುವುದಿಲ್ಲ ಎಂದು ತಾವು ಮೋದಿಗೆ ತಿಳಿಸಿದ್ದಾಗಿ ಹೇಳಿದ್ದಾರೆ. ಇದನ್ನೂ ಓದಿ: ಅಮಾನತಾದ ಸಂಸದರು ಸಂಸತ್ತಿನ ಮೊಗಸಾಲೆ, ಗ್ಯಾಲರಿಗೆ ಬರುವಂತಿಲ್ಲ: ಸುತ್ತೋಲೆ

ಘಟನೆಯೇನು?
ಸಂಸತ್ ಇತಿಹಾಸದಲ್ಲೇ ಗರಿಷ್ಠಮಟ್ಟದಲ್ಲಿ ಅಮಾನತು ಆಗಿರೋ ಸಂಸದರು ಪ್ರತಿಭಟನೆ ವೇಳೆ ಅಣಕು ಸಂಸತ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಉಪರಾಷ್ಟ್ರಪತಿಯೂ ಆಗಿರೋ ರಾಜ್ಯಸಭೆ ಚೇರ್ಮನ್ ಜಗದೀಪ್  ಧನ್ಕರ್‌ರನ್ನು ಅನುಕರಿಸಿ ಮಿಮಿಕ್ರಿ ಮಾಡಿದ್ದಾರೆ.

ನನ್ನ ಬೆನ್ನು ಮೂಳೆ ನೆಟ್ಟಗಿದೆ, ನಾನು ಸಾಕಷ್ಟು ಉದ್ದ ಇದ್ದೇನೆ ಎನ್ನುತ್ತಾ ಕಲ್ಯಾಣ್ ಬ್ಯಾನರ್ಜಿ, ಧನಕರ್ ದೈಹಿಕ ಸಂರಚನೆ ಬಗ್ಗೆ ಗೇಲಿ ಮಾಡಿದ್ದಾರೆ. ವಿಪರ್ಯಾಸ ಎಂದರೆ ಇದನ್ನು ನೋಡಿ ನಗುತ್ತಾ ರಾಹುಲ್ ಗಾಂಧಿ (Rahul Gandhi) ತಮ್ಮ ಮೊಬೈಲ್‌ನಲ್ಲಿ ವೀಡಿಯೋ ಶೂಟ್ ಮಾಡಿದ್ದಾರೆ. ರಾಹುಲ್ ಮಾತ್ರ ಅಲ್ಲದೆ ಅಲ್ಲಿ ನೆರೆದಿದ್ದವರೆಲ್ಲಾ ಗೊಳ್ಳೆಂದು ನಕ್ಕಿದ್ದಾರೆ. ರಾಹುಲ್ ಸೇರಿ ವಿಪಕ್ಷಗಳ ಈ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಖುದ್ದು ಧನ್ಕರ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಉಪರಾಷ್ಟ್ರಪತಿಗೆ ಅವಮಾನಿಸಿದ್ದನ್ನು ನೋಡಿ ದಿಗ್ಭ್ರಮೆಗೊಂಡಿದ್ದೇನೆ: ಮುರ್ಮು ಬೇಸರ

Share This Article