ಉಪರಾಷ್ಟ್ರಪತಿ ಧನ್ಕರ್ ಬಗ್ಗೆ ಅಣಕು ಪ್ರದರ್ಶನ, ಲೇವಡಿ- ನಗುತ್ತಾ ವೀಡಿಯೋ ಮಾಡಿದ ರಾಹುಲ್

By
1 Min Read

– ವಿಪಕ್ಷಗಳ ವರ್ತನೆಗೆ ಭಾರೀ ಆಕ್ರೋಶ

ನವದೆಹಲಿ: ಸಂವಿಧಾನಿಕ ಹುದ್ದೆಯಲಿರುವ ವ್ಯಕ್ತಿಗಳಿಗೆ ಅಪಮಾನ ಮಾಡುವ ಪರಂಪರೆ ಮುಂದುವರಿದಿದೆ. ಸಂಸತ್ (Parliament) ಇತಿಹಾಸದಲ್ಲೇ ಗರಿಷ್ಠಮಟ್ಟದಲ್ಲಿ ಅಮಾನತು ಆಗಿರೋ ಸಂಸದರು ಪ್ರತಿಭಟನೆ ವೇಳೆ ಅಣಕು ಸಂಸತ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, ಉಪರಾಷ್ಟ್ರಪತಿಯೂ ಆಗಿರೋ ರಾಜ್ಯಸಭೆ ಚೇರ್ಮನ್ ಜಗದೀಪ್ ಧನ್ಕರ್ (Jagadeep Dhankar) ರನ್ನು ಅನುಕರಿಸಿ ಮಿಮಿಕ್ರಿ ಮಾಡಿದ್ದಾರೆ.

ನನ್ನ ಬೆನ್ನು ಮೂಳೆ ನೆಟ್ಟಗಿದೆ, ನಾನು ಸಾಕಷ್ಟು ಉದ್ದ ಇದ್ದೇನೆ ಎನ್ನುತ್ತಾ ಕಲ್ಯಾಣ್ ಬ್ಯಾನರ್ಜಿ, ಧನ್ಕರ್ ದೈಹಿಕ ಸಂರಚನೆ ಬಗ್ಗೆ ಗೇಲಿ ಮಾಡಿದ್ದಾರೆ. ವಿಪರ್ಯಾಸ ಅಂದ್ರೆ ಇದನ್ನು ನೋಡಿ ನಗುತ್ತಾ ರಾಹುಲ್ ಗಾಂಧಿ (Rahul Gandhi) ಮೊಬೈಲ್‍ನಲ್ಲಿ ಶೂಟ್ ಮಾಡಿದ್ದಾರೆ. ಬರೀ ರಾಹುಲ್ ಮಾತ್ರ ಅಲ್ಲ, ಅಲ್ಲಿ ನೆರೆದಿದ್ದವರೆಲ್ಲಾ ಗೊಳ್ಳೆಂದು ನಕ್ಕಿದ್ದಾರೆ. ರಾಹುಲ್ ಸೇರಿ ವಿಪಕ್ಷಗಳ ಈ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಖುದ್ದು ಧನ್ಕರ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತೀವ್ರ ಆಕ್ರೋಶದ ಬೆನ್ನಲ್ಲೇ ರಾಮಮಂದಿರ ಉದ್ಘಾಟನೆಗೆ ಅಡ್ವಾಣಿ, ಜೋಶಿಗೆ ಆಹ್ವಾನ

ಮೇಲ್ಮನೆ ಕಲಾಪದಲ್ಲಿ ದಿಗ್ವಿಜಯ್ ಸಿಂಗ್ (Digvijay Singh) ಉದ್ದೇಶಿಸಿ ಮಾತನಾಡಿದ ಧನ್ಕರ್, ಇದು ನಿಜಕ್ಕೂ ನಾಚಿಕೆಗೇಡು. ಚೇರ್ಮನ್ ಹುದ್ದೆ, ಸ್ಪೀಕರ್ ಹುದ್ದೆಗೆ ಸಾಕಷ್ಟು ವೈರುಧ್ಯಗಳಿವೆ. ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟ ಮಾಡಿಕೊಳ್ಳಬಹುದು. ಆದರೆ ನಿಮ್ಮ ಪಕ್ಷದ ಸೀನಿಯರ್ ಒಬ್ಬರು ಮತ್ತೊಂದು ಪಕ್ಷದ ವ್ಯಕ್ತಿಯ ವೀಡಿಯೋ ಮಾಡುತ್ತಾರೆ. ಅವರಿಗೆ ಸದ್ಬುದ್ದಿ ಬರಲಿ ಎಂದಿದ್ದಾರೆ.

ಬಿಜೆಪಿ ಟ್ವೀಟ್ ಮಾಡಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ವಿಪಕ್ಷ ಸದಸ್ಯರನ್ನು ಏಕೆ ಸಸ್ಪೆಂಡ್ ಮಾಡಲಾಗಿದೆ ಎಂಬುದಕ್ಕೆ ಇದಕ್ಕೆ ಉತ್ತರ ಎಂದು ಬಿಜೆಪಿ ಹೇಳಿದೆ. ಧನ್ಕರ್ ಬಗ್ಗೆ ಕಾಂಗ್ರೆಸ್ ಗೇಲಿ ಇದೇ ಮೊದಲಲ್ಲ, ಕಳೆದ ವಾರ ಪ್ರಧಾನಿಗೆ ಧನ್ಕರ್ ನಮಸ್ಕರಿಸ್ತಿರೋ ವೀಡಿಯೋವನ್ನು ಕಾಂಗ್ರೆಸ್ ಹಂಚಿಕೊಂಡು ವ್ಯಂಗ್ಯ ಮಾಡಿತ್ತು. ಇದಕ್ಕೆ ಆಗಲೂ ಧನ್ಕರ್ ಆಕ್ರೋಶ ಹೊರಹಾಕಿದ್ರು.

Share This Article