RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್‌

Public TV
3 Min Read

ಕ್ಯಾನ್ಬೆರಾ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಫ್ರಾಂಚೈಸಿಯು ಟ್ರೇಡ್‌ ವಿಂಡೋ (T) ನಿಯಮದ ಮೂಲಕ 17.5 ಕೋಟಿ ರೂ.ಗೆ ಖರೀದಿಸಿದ ದೈತ್ಯ ಆಸೀಸ್‌ ಆಟಗಾರ ಕ್ಯಾಮರೂನ್‌ ಗ್ರೀನ್‌ (Cameron Green) ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ (Chronic Kidney Disease) ಬಳಲುತ್ತಿರುವ ಸತ್ಯ ಬಹಿರಂಗವಾಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಹುಟ್ಟಿನಿಂದಲೇ ಗ್ರೀನ್‌ ಅವರಿಗೆ ಈ ಕಾಯಿಲೆ ಇದೆ. ಗ್ರೀನ್‌ ತಾಯಿ ಬೀ ಟ್ರೇಸಿ ಅವರು 19 ವಾರಗಳ ಗರ್ಭಿಣಿಯಾಗಿದ್ದಾಗ ಸ್ಕ್ಯಾನಿಂಗ್ ವೇಳೆಯೇ ಈ ಸಮಸ್ಯೆ ಗೊತ್ತಾಗಿತ್ತು ಎಂದು ಗ್ರೀನ್ ತಿಳಿಸಿದ್ದಾರೆ.

ಆಸೀಸ್‌ ತಂಡದ ಕಾಯಂ ಪ್ಲೇಯರ್‌ ಆಗಿರುವ ಗ್ರೀನ್‌, ಐಪಿಎಲ್‌ನಲ್ಲೂ (IPL) ಮಿಂಚುತ್ತಿದ್ದಾರೆ. 2023ರಲ್ಲಿ ಐಪಿಎಲ್‌ ಪ್ರವೇಶಿಸಿದ ಗ್ರೀನ್‌ ಮುಂಬೈ ಇಂಡಿಯನ್ಸ್‌ (Mumbai Indians) ತಂಡಕ್ಕೆ ಸೇರ್ಪಡೆಯಾಗಿದ್ದರು. ಆದ್ರೆ ತಮ್ಮ 2ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಇದನ್ನೂ ಓದಿ: RCB ಸೇರಿದ ದೈತ್ಯ ಆಸೀಸ್‌ ಆಟಗಾರ – ರಾಯಲ್‌ ಚಾಲೆಂಜರ್ಸ್‌ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

ಕ್ಯಾಮರೂನ್‌ ಗ್ರೀನ್‌ 12 ವರ್ಷ ದಾಟಿದಾಗ ಬದುಕುಳಿಯುತ್ತಾರೆ ಅನ್ನುವ ಬಗ್ಗೆ ಅನುಮಾನವಿತ್ತು ಎಂದು ತಂದೆ ಗ್ಯಾರಿ ಹೇಳಿಕೊಂಡಿದ್ದಾರೆ. ಹೀಗಿದ್ದೂ ಗ್ರೀನ್‌ ಕ್ರಿಕೆಟ್‌ ವೃತ್ತಿ ಬದುಕನ್ನು ರೂಪಿಸುವಲ್ಲಿ ಅವರ ಪಾತ್ರ ಅಪಾರವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

2022ರಲ್ಲಿ ಆಸೀಸ್‌ ಟಿ20 ತಂಡದ ಭಾಗವಾಗಿದ್ದ ಗ್ರೀನ್‌ ಒಂದು ವರ್ಷದಲ್ಲೇ ಬ್ಯಾಟಿಂಗ್‌, ಬೌಲಿಂಗ್‌ ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗುರುತಿಸಿಕೊಂಡರು. ಬಳಿಕ ಭಾರತದ ವಿರುದ್ಧವೇ ನಡೆದ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಟ್ರೋಫಿ ಸರಣಿಯ ತಮ್ಮ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಸಾಧನೆ ಮಾಡಿದರು. ಇದರಿಂದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಫೈನಲ್‌ನಲ್ಲೂ ಆಡುವ ಅವಕಾಶ ಪಡೆದುಕೊಂಡರು. ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲೂ ಅವರು ಸ್ಥಾನ ಪಡೆದುಕೊಂಡಿದ್ದರು. ಮುಂದೆ ಪಾಕ್‌ ವಿರುದ್ಧ ನಡೆಯಲಿರುವ ಟೆಸ್ಟ್‌ ತಂಡಕ್ಕೂ ಆಯ್ಕೆಯಾಗಿದ್ದಾರೆ.

ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಗ್ರೀನ್‌, ನನಗೆ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇದೆ ಎಂದು ನನ್ನ ಹೆತ್ತವರಿಗೆ ನಾನು ಹುಟ್ಟಿದಾಗಲೇ ವೈದ್ಯರು ಹೇಳಿದ್ದರು. ಆರಂಭದಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ. ಅಲ್ಟ್ರಾಸೌಂಡ್ ಮೂಲಕ ಇದು ತಿಳಿದುಬಂತು. ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯು ಮೂತ್ರಪಿಂಡದ ಆರೋಗ್ಯ ಕಾರ್ಯದ ಮೇಲೆ ಪ್ರಭಾವ ಬೀರುವ ಕಾಯಿಲೆಯಾಗಿದೆ. ದುರದೃಷ್ಟವಶಾತ್, ನನ್ನ ಕಿಡ್ನಿ ರಕ್ತವನ್ನು ಫಿಲ್ಟರ್ ಮಾಡುವುದಿಲ್ಲ. ಸದ್ಯ ನನಗೆ 2ನೇ ಸ್ಟೇಜ್‌ನಲ್ಲಿ ಕಾಯಿಲೆ ಇದ್ದು, ಸಮಸ್ಯೆಯೊಂದಿಗೆ ಕ್ರಿಕೆಟ್‌ ಬದುಕನ್ನು ಸಾಗಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 89 ಸಾವಿರ ಕೋಟಿ ತಲುಪಿತು ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ- ಯಾವ ತಂಡದ್ದು ಎಷ್ಟು?

ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯಲ್ಲಿ 5 ಹಂತಗಳಿವೆ. ಮೊದಲ ಹಂತವು ಕಡಿಮೆ ತೀವ್ರತೆಯದ್ದು. ಐದನೇ ಹಂತವು ಕಿಡ್ನಿ ಕಸಿ ಅಥವಾ ಡಯಾಲಿಸಿಸ್ ಮಾಡುವಂಥದ್ದು. ಅದೃಷ್ಟವಶಾತ್, ನನ್ನದು 2ನೇ ಹಂತದಲ್ಲಿದೆ. ನಾನು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿರಲಿಲ್ಲ, ಆಹಾರ ಸೇವಿಸುತ್ತಿರಲಿಲ್ಲ. ಅಲ್ಲದೇ ಆಟದ ಸಮಯದಲ್ಲೂ ನನ್ನ ಆರೋಗ್ಯ ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತ ಅನ್ನಿಸುತ್ತೆ. ಕಾಲಾನಂತರದಲ್ಲಿ ನಿಧಾನವಾಗಿ ನಾನು ಎಲ್ಲವನ್ನೂ ಸರಿಯಾಗಿ ಅನುಸರಿಸುತ್ತಿದ್ದೇನೆ. ಆದರೂ ನನಗೆ ಅದರ ಸೆಳೆತವಿದೆ ಎಂದಿದ್ದಾರೆ.

Share This Article