ಹಿಂಡೆನ್‌ಬರ್ಗ್‌ ಆರೋಪ ಅಪ್ರಸ್ತುತ – ಅಮೆರಿಕ ಹೇಳಿಕೆ ಬೆನ್ನಲ್ಲೇ ಅದಾನಿ ಕಂಪನಿಗಳ ಷೇರು ಮೌಲ್ಯ ಭಾರೀ ಏರಿಕೆ

Public TV
3 Min Read

– ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 16ನೇ ಸ್ಥಾನಕ್ಕೆ ಜಿಗಿದ ಗೌತಮ್‌ ಅದಾನಿ

ಮುಂಬೈ: ಅದಾನಿ ಸಮೂಹದ (Adani Group) ವಿರುದ್ಧ ಹಿಂಡೆನ್‌ಬರ್ಗ್‌ ರಿಸರ್ಚ್‌ (Hindenburg Research) ಮಾಡಿದ ಆರೋಪ ಅಪ್ರಸ್ತುತ ಎಂದು ಅಮೆರಿಕದ ಸಂಸ್ಥೆ ತೀರ್ಮಾನಿಸಿದ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರುಗಳ ಮೌಲ್ಯ ಒಂದೇ ದಿನದಲ್ಲಿ ಭಾರೀ ಏರಿಕೆಯಾಗಿದೆ.

ನವೆಂಬರ್‌ ಮೊದಲ ವಾರದಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ (Colombo) ಬಂದರಿನಲ್ಲಿ ಕಂಟೈನರ್ ಟರ್ಮಿನಲ್‌ ಯೋಜನೆಗೆ (Container Terminal Project) ಅಮೆರಿಕದ ಇಂಟರ್‌ನ್ಯಾಷನಲ್‌ ಡೆವಲಪ್‌ಮೆಂಟ್‌ ಫೈನಾನ್ಸ್‌ ಕಾರ್ಪೋರೇಷನ್‌ (DFC) 553 ಮಿಲಿಯನ್‌ ಡಾಲರ್‌ (ಅಂದಾಜು 4,600 ಕೋಟಿ ರೂ.) ಹಣವನ್ನು ಅದಾನಿ ಪೋರ್ಟ್‌ ಎಸ್‌ಇಝಡ್‌(Adani Port Sez) ಸಾಲವಾಗಿ ನೀಡಿದೆ.

ಅದಾನಿ ಕಂಪನಿಗೆ ಭಾರೀ ಮೊತ್ತದ ಸಾಲ ನೀಡುವ ಮುನ್ನ ಡಿಎಫ್‌ಸಿ ಹಿಂಡೆನ್‌ಬರ್ಗ್‌ ಮಾಡಿದ ಎಲ್ಲಾ ಆರೋಪಗಳನ್ನು ಅಧ್ಯಯನ ಮಾಡಿತ್ತು. ಹಿಂಡೆನ್‌ಬರ್ಗ್‌ ಸಂಶೋಧನಾ ವರದಿಯ ಸತ್ಯಾಸತ್ಯತೆಯ ಬಳಿಕ ಈ ಆರೋಪ ಅಪ್ರಸ್ತುತ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ಡಿಎಫ್‌ಸಿ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಬ್ಲೂಮ್‌ಬರ್ಗ್‌ ವರದಿ ಮಾಡಿದೆ.  ಈ ವರದಿ ಪ್ರಕಟವಾದ ಬೆನ್ನಲ್ಲೇ ಮಂಗಳವಾರ ಒಂದೇ ದಿನ ಅದಾನಿ ಸಮೂಹದ ಕಂಪನಿಗಳ ಮೌಲ್ಯ 12.5 ಲಕ್ಷ ಕೋಟಿ ಏರಿಕೆಯಾಗಿದೆ.

ಅಮೆರಿಕ ಬೇರೆ ದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು ಹೊಸದೆನಲ್ಲ. ಆದರೆ ಏಷ್ಯಾದಲ್ಲಿ ಚೀನಾ (China) ಪ್ರಭಾವ ಕಡಿಮೆ ಮಾಡಲು ಅಮೆರಿಕ ಮುಂದಾಗುತ್ತಿದೆ. ಇದರ ಭಾಗವಾಗಿ ಭಾರತದ ಅದಾನಿ ಕಂಪನಿಯ ಮೇಲೆ ಹೂಡಿಕೆ ಮಾಡುತ್ತಿದೆ.  ಇದನ್ನೂ ಓದಿ: ಅದಾನಿ ಷೇರು ಶಾರ್ಟ್‌ ಸೆಲ್ಲಿಂಗ್‌, 16 ಕಂಪನಿಗಳಿಗೆ ಭಾರೀ ಲಾಭ – ಇಡಿ ತನಿಖಾ ವರದಿಯಲ್ಲಿ ಏನಿದೆ?

ಅದಾನಿ ಕಂಪನಿಗಳ ಷೇರು ಜಿಗಿತ – ಯಾವುದು ಎಷ್ಟು ಏರಿಕೆ?
ಗ್ರೀನ್‌ – 224.75(20%)
ಟ್ರಾನ್ಸ್‌ಮಿಷನ್‌ – 180.71(19.99%)
ಗ್ಯಾಸ್‌ – 45.61(19.88%)
ಎಂಟರ್‌ಪ್ರೈಸಸ್‌ – 428.16(16.91%)
ಪವರ್‌ -73.45(15.80%)
ಪೋರ್ಟ್ಸ್‌ ಎಸ್‌ಇಝಡ್‌ -134.46(15.30%)
ವಿಲ್ಮರ್‌ – 34.40(9.93%)

ಶತಕೋಟ್ಯಧಿಪತಿ ಗೌತಮ್ ಅದಾನಿ ಸಮೂಹ ಮಾರಿಷಸ್‌ ಮೂಲದ ಶೆಲ್ ಕಂಪನಿಗಳನ್ನು ಬಳಸಿ ಸ್ಟಾಕ್‌ ಮಾರುಕಟ್ಟೆಯಲ್ಲಿ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಳ ಮಾಡಿದೆ ಎಂದು ಹಿಂಡೆನ್‌ಬರ್ಗ್‌ ಆರೋಪಿಸಿತ್ತು. ಈ ವರ್ಷದ ಜನವರಿ 24 ರಂದು ವರದಿ ಪ್ರಕಟವಾದ ಬಳಿಕ ಅದಾನಿ ಕಂಪನಿಯ ಷೇರುಗಳ ಮೌಲ್ಯ ಇಳಿಕೆಯಾಗಿ ಗೌತಮ್‌ ಅದಾನಿ ಅವರ ಸಂಪತ್ತು ಕರಗಿತ್ತು. ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಅದಾನಿ ಸಮೂಹದ ಮುಖ್ಯಸ್ಥ ಗೌತಮ್‌ ಅದಾನಿ (Gautam Adani) 10 ದಿನದಲ್ಲೇ 25ನೇ ಸ್ಥಾನಕ್ಕೆ ಕುಸಿದಿದ್ದರು. ಇದನ್ನೂ ಓದಿ: ಇದು ಭಾರತದ ಮೇಲೆ ನಡೆಸಿದ ವ್ಯವಸ್ಥಿತ ದಾಳಿ – ಆರೋಪಗಳಿಗೆ 413 ಪುಟಗಳ ಉತ್ತರ ನೀಡಿದ ಅದಾನಿ ಗ್ರೂಪ್‌

ಹಿಂಡೆನ್‌ಬರ್ಗ್‌ ಸಂಶೋಧನಾ ವರದಿ ಸುಳ್ಳು, ಆಧಾರ ರಹಿತ ಎಂದು ಮಾರಿಷಸ್‌ ಸರ್ಕಾರ ಅಲ್ಲಿನ ಸಂಸತ್ತಿಗೆ ಉತ್ತರ ನೀಡಿತ್ತು. ಭಾರತದಲ್ಲಿ ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿ ಸಹ ಅದಾನಿ ಕಂಪನಿಗೆ ಕ್ಲಿನ್‌ ಚೀಟ್‌ ನೀಡಿತ್ತು. ಈ ಬೆಳವಣಿಗೆಯ ನಂತರ ಅದಾನಿ ಸಮೂಹ ಕಂಪನಿಗಳ ಷೇರುಗಳ ಮೌಲ್ಯ ನಿಧನವಾಗಿ ಏರಿಕೆ ಕಾಣತೊಡಗಿತ್ತು.

16ನೇ ಸ್ಥಾನಕ್ಕೆ ಜಿಗಿತ
ಸದ್ಯ ಈಗ ಗೌತಮ್‌ ಅದಾನಿ ಅವರು ಬ್ಲೂಮ್‌ಬರ್ಗ್‌ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 70.2 ಬಿಲಿಯನ್‌ ಡಾಲರ್‌ ಸಂಪತ್ತಿನೊಂದಿಗೆ 16ನೇ ಸ್ಥಾನಕ್ಕೆ ಜಿಗಿದಿದ್ದರೆ. ಮುಕೇಶ್‌ ಅಂಬಾನಿ 90.4 ಬಿಲಿಯನ್‌ ಡಾಲರ್‌ ಸಂಪತ್ತಿನೊಂದಿಗೆ14ನೇ ಸ್ಥಾನ ಪಡೆದಿದ್ದಾರೆ. 220 ಬಿಲಿಯನ್‌ ಡಾಲರ್‌ ಸಂಪತ್ತು ಹೊಂದಿರುವ ಎಲೋನ್‌ ಮಸ್ಕ್‌ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದನ್ನೂ ಓದಿ: ಷೇರು ವಿವಾದ; ಅದಾನಿ ಗ್ರೂಪ್‌ಗೆ ಸುಪ್ರೀಂ ಕೋರ್ಟ್ ಸಮಿತಿ ಕ್ಲೀನ್ ಚಿಟ್

ಅದಾನಿಯಿಂದ ಎಫ್‌ಪಿಒ ರದ್ದು:
20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ ಈ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್‌ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡೆನ್‌ಬರ್ಗ್‌ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್‌ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು. ಇದನ್ನೂ ಓದಿ: ಅದಾನಿ ಸಮೂಹ ಕಂಪನಿಗಳಲ್ಲಿ 15,446 ಕೋಟಿ ಹೂಡಿಕೆ – ಅದಾನಿ ಕೈ ಹಿಡಿದ ರಾಜೀವ್‌ ಜೈನ್‌ ಯಾರು?

ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು  ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್‌ ಅದಾನಿ ತಿಳಿಸಿದ್ದರು.

Share This Article