T20 ಕದನಕ್ಕೆ ವಿಶ್ವಕಪ್‌ ದಾಖಲೆ ಉಡೀಸ್‌ – ಏಕಕಾಲಕ್ಕೆ ಕರ್ನಾಟಕದ ಜನಸಂಖ್ಯೆಗಿಂತಲೂ ಅಧಿಕ ಮಂದಿ ವೀಕ್ಷಣೆ

Public TV
2 Min Read

ವಿಶಾಖಪಟ್ಟಣಂ: ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಬಳಿಕ‌ ಭಾರತದಲ್ಲಿ ಕ್ರಿಕೆಟ್‌ ಕ್ರೇಜ್‌ ಮತ್ತಷ್ಟು ಹೆಚ್ಚಾಗಿದೆ. ಜಿಯೋಸಿನಿಮಾದಲ್ಲಿ (Jiocinema) ಅತ್ಯಧಿಕ ವೀಕ್ಷಕರ (Viewership) ಸಂಖ್ಯೆ ತಲುಪಿ ದಾಖಲೆ ಬರೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಗುರುವಾರ ನಡೆದ ಭಾರತ-ಆಸ್ಟ್ರೇಲಿಯಾ (Ind vs Aus) ನಡುವಿನ ಮೊದಲ ಟಿ20 ಪಂದ್ಯವನ್ನು ಏಕಕಾಲಕ್ಕೆ 8.6 ಕೋಟಿಗಿಂತಲೂ ಅಧಿಕ ಕ್ರಿಕೆಟ್‌ ಅಭಿಮಾನಿಗಳು ವೀಕ್ಷಣೆ ಮಾಡಿದ್ದು, ಕ್ರಿಕೆಟ್‌ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಿದೆ. ಇತ್ತೀಚೆಗೆ ಭಾರತ ಮತ್ತು ಆಸೀಸ್‌ ನಡುವಿನ ವಿಶ್ವಕಪ್‌ ಫೈನಲ್‌ ಪಂದ್ಯವನ್ನು 5.9 ಕೋಟಿ ಮಂದಿ ವೀಕ್ಷಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಆದ್ರೆ ಜಿಯೋಸಿನಿಮಾ ಏಕಕಾಲಕ್ಕೆ 8.6 ಕೋಟಿಗೂ ಅಧಿಕ ವೀಕ್ಷಕರನ್ನ ಕಂಡಿದ್ದು, ಹೊಸ ದಾಖಲೆ ನಿರ್ಮಿಸಿದೆ.

ಭಾರತ ಮತ್ತು ಆಸೀಸ್‌ (Ind vs Aus) ಟಿ20 ಆರಂಭದಿಂದಲೇ ಪ್ರೇಕ್ಷಕರು ಓಟಿಟಿ ವೇದಿಕೆಗೆ ಲಗ್ಗೆಯಿಡಲು ಶುರು ಮಾಡಿದರು. ಆಸೀಸ್‌ ಬ್ಯಾಟಿಂಗ್‌ ಮುಗಿದು, ಟೀಂ ಇಂಡಿಯಾ ತನ್ನ ಇನ್ನಿಂಗ್ಸ್‌ ಆರಂಭಿಸುತ್ತಿದ್ದಂತೆ ವೀಕ್ಷಕರ ಸಂಖ್ಯೆ 8 ಕೋಟಿ ಮೀರಿತ್ತು. ಭಾರತ ತನ್ನ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ 1 ವಿಕೆಟ್‌ ಕಳೆದುಕೊಂಡು 11 ರನ್‌ ಗಳಿಸಿತ್ತು. ಇಶಾನ್‌ ಕಿಶನ್‌ ಕ್ರೀಸ್‌ನಲ್ಲಿದ್ದರು, ಈ ಸಂದರ್ಭದಲ್ಲಿ ವೀಕ್ಷಕರ ಸಂಖ್ಯೆ 8.6 ಕೋಟಿ ತಲುಪಿತ್ತು, ಅಲ್ಲದೇ ಜಿಯೋಸಿನಿಮಾ ಆ್ಯಪ್‌ ಕೂಡ ಕ್ರ್ಯಾಶ್‌ ಆಗಿತ್ತು.

ಈ ಹಿಂದೆ ವಿಶ್ವಕಪ್‌ನಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಕಿವೀಸ್‌ ಪಂದ್ಯವನ್ನು 4.3 ಕೋಟಿ ಮಂದಿ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆ ಮಾಡಿದ್ದರು. ಅದಕ್ಕೂ ಮುನ್ನ 2023ರ IPL ಆವೃತ್ತಿಯಲ್ಲಿ ಜಿಯೋಸಿನಿಮಾ 2.53 ಕೋಟಿ ವೀಕ್ಷಣೆ ಕಾಣುವ ಮೂಲಕ ಸತತ 4ನೇ ಬಾರಿಗೆ ತನ್ನದೇ ವೀಕ್ಷಕರ ದಾಖಲೆ ಮುರಿದಿತ್ತು. ಆದ್ರೆ ಇಂಡೋ-ಆಸೀಸ್‌ ಟಿ20 ಕದನ ಹಿಂದಿನ ಎಲ್ಲಾ ದಾಖಲೆಗಳನ್ನ ನುಚ್ಚುನೂರು ಮಾಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟಿ20 ಸರಣಿ ಆರಂಭಗೊಂಡಿದ್ದು, ಮೊದಲ ಟಿ20ರಲ್ಲಿ ಭಾರತ ಅಮೋಘ ಜಯ ಸಾಧಿಸಿದೆ. ಗುರುವಾರ ನಡೆದ ಪಂದ್ಯವು ಕೊನೇ ಕ್ಷಣದವರೆಗೂ ರೋಚಕತೆಯಿಂದ ಕೂಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 3 ವಿಕೆಟ್‌ಗೆ 208 ರನ್‌ ಗಳಿಸಿದ್ರೆ, ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಭಾರತ 19.5 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 209 ರನ್‌ಗಳ ಜಯ ಸಾಧಿಸಿತು. ಕೊನೇ ಎಸೆತದಲ್ಲಿ ರಿಂಕು ಸಿಂಗ್‌ ಸಿಕ್ಸರ್‌ ಸಿಡಿಸಿದರೂ, ನೋಬಾಲ್‌ ಆದ ಕಾರಣ ಕೇವಲ 1 ರನ್‌ ಮಾತ್ರವೇ ಸೇರ್ಪಡೆಯಾಯಿತು.

Share This Article