ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

Public TV
2 Min Read

ಟೆಲ್ ಅವಿವ್: ಯುದ್ಧಪೀಡಿತ ಗಾಜಾ ಪಟ್ಟಿಯ (Gaza Strip) ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾವನ್ನು (Al-Shifa hospital) ಹಮಾಸ್ (Hamas) ತಮ್ಮ ಉಗ್ರ ಚಟುವಟಿಕೆಗಳ ತಾಣವಾಗಿಸಿಕೊಂಡಿರುವುದಾಗಿ ಇಸ್ರೇಲ್ (Israel) ವೀಡಿಯೋ ಸಾಕ್ಷಿ ಸಮೇತ ತಿಳಿಸಿದೆ.

ಅಲ್ ಶಿಫಾ ಆಸ್ಪತ್ರೆಯಲ್ಲಿ ಹಮಾಸ್ ಉಗ್ರರು ಒತ್ತೆಯಾಳುಗಳನ್ನು (Hostages) ಇಟ್ಟಿರುವ ವೀಡಿಯೋವೊಂದನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ಹಮಾಸ್ ಉಗ್ರರ ಮತ್ತೊಂದು ಮುಖ ಬಯಲಾಗಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರು ನೇಪಾಳ, ಥಾಯ್ಲೆಂಡ್ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದೆ. ಆ ಒತ್ತೆಯಾಳುಗಳನ್ನು ಅಲ್ ಶಿಫಾ ಆಸ್ಪತ್ರೆಯಲ್ಲಿಯೇ ಇರಿಸಿದೆ. ಇಸ್ರೇಲ್‌ನಲ್ಲಿದ್ದ ಇವರನ್ನು ಹಮಾಸ್ ಉಗ್ರರು ಅಪಹರಿಸಿ ಅವರ ಮೇಲೆ ಹಲ್ಲೆ ನಡೆಸಿ ಗಾಜಾ ಆಸ್ಪತ್ರೆಯಲ್ಲಿ ಇರಿಸಿದೆ ಎಂದು ವೀಡಿಯೋ ಸಮೇತ ಇಸ್ರೇಲ್ ಸೇನೆ ಎಕ್ಸ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ.

ಇಷ್ಟು ಮಾತ್ರವಲ್ಲದೇ ಅಲ್ ಶಿಫಾ ಆಸ್ಪತ್ರೆಯಲ್ಲಿ ಸುರಂಗವೊಂದನ್ನು ಪತ್ತೆಹಚ್ಚಿರುವ ಮತ್ತೊಂದು ವೀಡಿಯೋವನ್ನು ಇಸ್ರೇಲ್ ಸೇನೆ ಹಂಚಿಕೊಂಡಿದೆ. ಅಲ್ ಶಿಫಾ ಆಸ್ಪತ್ರೆಯ ಸಂಕೀರ್ಣದ ಕೆಳಗಡೆ ಸುಮಾರು 55 ಮೀ. ಉದ್ದದ ಸುರಂಗವನ್ನು ಕಂಡುಹಿಡಿದಿರುವುದಾಗಿ ತಿಳಿಸಿದೆ. ಈ ಸುರಂಗದ ಪತ್ತೆಯಿಂದಾಗಿ ಹಮಾಸ್ ಉಗ್ರರು ಗಾಜಾ ನಿವಾಸಿಗಳನ್ನು ಹಾಗೂ ರೋಗಿಗಳನ್ನು ರಕ್ಷಾ ಕವಚವಾಗಿ ಬಳಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂಬುದನ್ನು ಒತ್ತಿ ಹೇಳಿದೆ.

ಆದರೆ ಅಲ್ ಶಿಫಾ ಆಸ್ಪತ್ರೆಯ ಕೆಳಗಡೆ ಸುರಂಗವನ್ನು ಪತ್ತೆ ಮಾಡಿರುವ ಇಸ್ರೇಲ್‌ನ ಹೇಳಿಕೆಯನ್ನು ಹಮಾಸ್ ತಳ್ಳಿಹಾಕಿದೆ. ಇದು ಶುದ್ಧ ಸುಳ್ಳು ಎಂದಿದೆ. ಇಸ್ರೇಲಿ ಪಡೆಗಳು ಕಳೆದ 8 ದಿನಗಳಿಂದ ಆಸ್ಪತ್ರೆಯಲ್ಲಿದ್ದು, ಅವರಿಂದ ಇನ್ನೂ ಏನನ್ನೂ ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದು ಗಾಜಾ ಆರೋಗ್ಯ ಸಚಿವಾಲಯದ ನಿರ್ದೇಶಕ ಮೌನಿರ್ ಎಲ್ ಬಾರ್ಶ್ ಅಲ್ ಜಜೀರಾ ತಿಳಿಸಿದ್ದಾರೆ. ಇದನ್ನೂ ಓದಿ: ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೇಡ್‌ ಮಾತು

ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಹಮಾಸ್ ಉಗ್ರರ ತಾಣ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸಿದ್ದು ಇದುವರೆಗೂ 11 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹಮಾಸ್ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದನ್ನೂ ಓದಿ: ವಿಶಾಖಪಟ್ಟಣಂ ಬಂದರಿನಲ್ಲಿ ಬೆಂಕಿ ಅವಘಡ- 40 ದೋಣಿಗಳು ಭಸ್ಮ

Share This Article